

ಕುಶಾಲನಗರ:
ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಲು ಶ್ರೀ ಗಣಪತಿ ದೇವಸ್ಥಾನ ಸಮಿತಿ ವತಿಯಿಂದ ಭಾನುವಾರ ಇಲ್ಲಿ ಏರ್ಪಡಿಸಿದ್ದ ಸಂಘ-ಸAಸ್ಥೆಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಯಿತು.
ಕುಶಾಲನಗರಕ್ಕೆ 100 ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಕೆಲಸ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಶ್ರಮವೂ ಶ್ಲಾಘನೀಯ. ಅದೇ ರೀತಿಯಲ್ಲಿ ಜಾತ್ರಾ ಮೈದಾನವೂ ಅಷ್ಟೇ ಅವಶ್ಯಕ. ಹಾಗಾಗಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಈಗ ನಿಗದಿಯಾಗಿರುವ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನ ಬದಲಿಗೆ ಪರ್ಯಾಯ ಜಾಗವಾಗಿ ಸರ್ಕಾರಿ ಪಾಲಿಟೆಕ್ನಿಕ್ ಬಳಿಯ ಸ್ಥಳ ಅಥವಾ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಬಳಸಿಕೊಳ್ಳಬಹುದಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು.
ಶಾಸಕ ಡಾ. ಮಂತರ್ ಗೌಡ ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ವಿಷಯದಲ್ಲಿ ಸಾರ್ವಜನಿಕರ ಒತ್ತಡ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ವಿರೋಧದ ಮಧ್ಯೆಯೂ ಜಾತ್ರಾ ಮೈದಾನದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದರೆ ಇದೊಂದು ವಿಷಯದಲ್ಲಿ ಕೆಟ್ಟ ಹೆಸರು ಬರಬಹುದು. ಹಾಗಾಗಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಸಕರು ಪ್ರಜಾಸತ್ತಾತ್ಮಕವಾಗಿ ಆಲೋಚನೆ ಮಾಡಬೇಕು ಎನ್ನುವ ಸಲಹೆಗಳು ಸಭೆಯಲ್ಲಿ ಕೇಳಿಬಂದವು.
ಆರಂಭದಲ್ಲಿ ಮಾತನಾಡಿದ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ನಿರ್ದೇಶಕ ಟಿ.ಆರ್. ಶರವಣಕುಮಾರ್ ನಾವು ಆಸ್ಪತ್ರೆಗೆ ವಿರೋಧಿಗಳಲ್ಲ. ಆಸ್ಪತ್ರೆಯೂ ಬೇಕು. ಜಾತ್ರಾ ಮೈದಾನವೂ ಉಳಿಯಬೇಕು. ಜಾತ್ರಾ ಮೈದಾನ ಜಾಗದ ಬಗ್ಗೆ ಶಾಸಕರು ಹಠ ಹಿಡಿದು ಕೂತರೆ ಅವರು ಈ ತನಕ ಗಳಿಸಿದ ಒಳೆಯ ಹೆಸರು ಹಾಳಾಗಲಿದೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ರಾಜ್ಯ ಬಜೆಟ್‌ನಲ್ಲೇ ಮಂಜೂರಾದ ಆಸ್ಪತ್ರೆ ಇದು. ಈ ಆಸ್ಪತ್ರೆಗಾಗಿ ತರಾತುರಿಯಲ್ಲಿ ಸರ್ವೆ ನಡೆಸಿ, ಆರ್‌ಟಿಸಿಯೂ ಆಗಿದೆ. 100 ಆಸ್ಪತ್ರೆ ಬಂದರೆ ಸೌಲಭ್ಯಗಳು ಹೆಚ್ಚಾಗುತ್ತದೆ. ಹಾಗಾಗಿ ಆಸ್ಪತ್ರೆ ಬೇಕೇ ಬೇಕು. ಇದರ ಜತೆಗೆ ಊರಿನ ಹಿತಾಶಕ್ತಿಯೂ ಮುಖ್ಯವಾಗಬೇಕು. ಕೈ ಮೀರಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಈಗಲೇ ಶಾಸಕರು ಎಚ್ಚೆತ್ತುಕೊಳ್ಳಬೇಕು. ಈ ವಿಷಯದಲ್ಲಿ ಶಾಸಕರ ಮೌನ ಅರ್ಥ ಆಗುತ್ತಿಲ್ಲ. ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ ಜಾತ್ರಾ ಮೈದಾನ ಉಳಿಸಿಕೊಳ್ಳಲು ಹೋರಾಟಕ್ಕೂ ಸಿದ್ಧ. ಪಕ್ಷ ಮುಖ್ಯವಲ್ಲ. ಊರಿನ ಬೆಳವಣಿಗೆ ಮುಖ್ಯ ಎಂದರು. ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ ಆಸ್ಪತ್ರೆಗೆ ಪರ್ಯಾಯ ಜಾಗವಾಗಿ ಸರ್ಕಾರಿ ಪಾಲಿಟೆಕ್ನಿಕ್ ಜಾಗ ಅಥವಾ ಕೂಡಿಗೆ ಸರ್ಕಾರಿ ಆಸ್ಪತ್ರೆ ಜಾಗದ ಬಗ್ಗೆ ಲಿಖಿತವಾಗಿ ಶಾಸಕರ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ ಸರ್ಕಾರಿ ಆಸ್ಪತ್ರೆಗೆ
ಪರ್ಯಾಯ ಜಾಗ ಮೊದಲು ಗುರುತಿಸಬೇಕು. ನಂತರ ಜಾತ್ರಾ ಮೈದಾನ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಇಳಿಯಬೇಕು ಎಂದರು.
ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಕನ್ನಡ ಸಿರಿ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕುಶಾಲನಗರ ಬ್ರಾಹ್ಮಣರ ಸಮಾಜದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಕ್ರೀಡಾ ಸಂಘಟಕ ಲಕ್ಷ್ಮೀನಾರಾಯಣ ನಾಣಿ, ಮಹಿಳಾ ಸಮಾಜದ ಅಧ್ಯಕ್ಷೆ ಸೆಲಿನಾ, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಕರಂದ್ಲಾಜೆ ಆನಂದ, ಸಾಮಾಜಿಕ ಹೋರಾಟಗಾರ ಕೆ.ಜಿ. ಮನು, ದಲಿತ ಸಂಘಟನೆಗಳ ಮುಖಂಡ ಕೆ.ಬಿ. ರಾಜು, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಘಟಕ ಅಧ್ಯಕ್ಷ ಕೆ.ಎಸ್. ನಾಗೇಶ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪುರಸಭೆ ಸದಸ್ಯ ವಿ.ಎಸ್. ಆನಂದ ಕುಮಾರ್, ಲಯನ್ಸ್ ಕ್ಲಬ್‌ನ ಕೊಡಗನ ಹರ್ಷ ಮತ್ತಿತರರು ಸರ್ಕಾರಿ ಆಸ್ಪತ್ರೆಗೆ ಪರ್ಯಾಯ ಜಾಗ ಗುರುತಿಸಲು ಒತ್ತಾಯ ಹೇರುವುದರ ಜತೆಗೆ ಜಾತ್ರಾ ಮೈದಾನ ಉಳಿಸಿಕೊಳ್ಳುವುದಕ್ಕೆ ಒತ್ತು ನೀಡಿ ಹಲವು ಸಲಹೆಗಳನ್ನು ನೀಡಿದರು.