ಮಧ್ಯವರ್ತಿಗಳ ಹಾವಳಿಗೆ ಆಕ್ರೋಶ

meet
Published on

 ಕುಶಾಲನಗರ:

ಶುಕ್ರವಾರ ನಡೆದ ಕುಶಾಲನಗರ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸೋಮವಾರ ವಿಜಯವಾಣಿಯಲ್ಲಿ ಪ್ರಕಟವಾದ 'ಕುಶಾಲನಗರ ಪುರಸಭೆಯಲ್ಲಿ ದಲ್ಲಾಳಿಗಳ ದಂಧೆ' ವಿಶೇಷ ವರದಿ ಭಾರಿ ಚರ್ಚೆಗೆ ಕಾರಣವಾಯಿತು. ಮೊದಲಿಗೆ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ವಿ.ಎಸ್. ಆನಂದ ಕುಮಾರ್, ಕುಶಾಲನಗರ ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ವಿಜಯವಾಣಿಯಲ್ಲಿ ಈ ವರದಿ ಪ್ರಕಟವಾದ ನಂತರ ಸಾರ್ವಜನಿಕ ವಲಯದಲ್ಲಿ ಇದೇ‌ ವಿಷಯ ಚರ್ಚೆ ಆಗುತ್ತಿದೆ. ಮುಖ್ಯಾಧಿಕಾರಿ, ಅಧ್ಯಕ್ಷರೇ ಮಧ್ಯವರ್ತಿಗಳಿಗೆ ಪ್ರೋತ್ಸಾಹ ಕೊಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ವಿಷಯ ಹಿಂದಿನ ಸಾಮಾನ್ಯ ಸಭೆಯಲ್ಲೂ ಚರ್ಚೆ ಆಗಿದೆ. ಆದರೂ ಪ್ರಯೋಜನ ಆಗಿಲ್ಲ. ಮಧ್ಯವರ್ತಿಗಳ ಎದುರು ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಭ್ರಷ್ಟಾಷಾರ ಮಿತಿ ಮೀರಿದೆ. ಹೀಗಾದರೆ ಬೇಸತ್ತು ಸದಸ್ಯತ್ವಕ್ಕೆ

ರಾಜೀನಾಮೆ ಕೊಡಬೇಕಾಗುತ್ತದೆ ಎಂದರಲ್ಲದೆ ಮಧ್ಯವರ್ತಿಗಳ ಬಗ್ಗೆ ಪ್ರಶ್ನೆ ಮಾಡಿದ ಸದಸ್ಯರ ಕೊಲೆ ಪ್ರಯತ್ನವೂ ನಡೆದಿದೆ. ಸದಸ್ಯರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅಧಿಕಾರಿಗಳೇ ಜವಾಬ್ದಾರಿ ಎಂದು ಎಚ್ಚರಿಸಿದರು. ಪುರಸಭೆ ಒಳಗೆ ಮಧ್ಯವರ್ತಿಗಳು ಎಷ್ಟು ರಾಜಾರೋಷವಾಗಿ ತಿರುಗಾಡುತ್ತಾರೆಂದರೆ ಮುಖ್ಯಾಧಿಕಾರಿ ಕುರ್ಚಿ ಮೇಲೆಯೇ ಹೋಗಿ ಕುಳಿತುಕೊಂಡರೂ ಯಾರೂ ಕೇಳುವುದಿಲ್ಲ. ಯಾರಾದರೂ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಬಂದರೆ ಅವರ ಬಗ್ಗೆ ಸಿಬ್ಬಂದಿಯೇ ಮಧ್ಯವರ್ತಿಗೆ ಮಾಹಿತಿ ಕೊಡುತ್ತಾರೆ. ನಂತರ ಮಧ್ಯವರ್ತಿ ವ್ಯವಹಾರ ಕುದುರಿಸುತ್ತಾರೆ. ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು‌ ಗಂಭೀರ ಆರೋಪ ಮಾಡಿದರು.

ಚಿಕ್ಕಪುಟ್ಟ ಕೆಲಸಕ್ಕಾಗಿ ಪುರಸಭೆ ಕಚೇರಿಗೆ ಬರುವ

ಸಾರ್ವಜನಿಕರು ಬೆಳಗ್ಗೆಯಿಂದ ಸಂಜೆ ತನಕ ಇರುತ್ತಾರೆ ಎಂದರೆ ಇದರ ಅರ್ಥ ಏನು? ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ನಾಮನಿರ್ದೇಶಿತ ಸದಸ್ಯ

ಪ್ರಕಾಶ್ ಮಾತನಾಡಿ ಮಧ್ಯವರ್ತಿಗಳಿಗೆ ಪ್ರತ್ಯೇಕ ಕೌಂಟರ್ ಮಾಡಿ ಎಂದು ಲೇವಡಿ ಮಾಡಿದರು. ಪುರಸಭೆಯ ಸಿಸಿಟಿವಿ ಫೂಟೇಜ್ ಕೊಡಿ. ಇದರಲ್ಲಿ ಮಧ್ಯವರ್ತಿಗಳನ್ನು‌ ಗುರುತಿಸಬಹುದು. ಕೌನ್ಸಿಲರ್‌ಗಳನ್ನೂ ಬ್ರೋಕರ್ ಎಂದು ಕರೆಯುವ ಸ್ಥಿತಿ ಬಂದಿದೆ. ಇಲ್ಲಿಯ ಅಧಿಕಾರಿ ಮತ್ತು ಸಿಬ್ಬಂದಿ ಶಾಸಕರ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ವಿಷಯವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ನಾಮನಿರ್ದೇಶಿತ ಸದಸ್ಯ ನವೀನ್ ಮಾತನಾಡಿ ದೂರು ಪೆಟ್ಟಿಗೆ, ಅಹವಾಲು ಪೆಟ್ಟಿಗೆ ಇಡಬೇಕು ಎಂದು ಒತ್ತಾಯಿಸಿದರು.

ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್, ಮಧ್ಯವರ್ತಿ ವಿಷಯದಲ್ಲಿ ಎಲ್ಲಾ ಸಿಬ್ಬಂದಿ, ಗುತ್ತಿಗೆ ನೌಕರರಿಗೆ  ನೊಟೀಸ್ ಕೊಡಲಾಗಿದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಅವಕಾಶ ಕೊಡದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಒಂದು ವೇಳೆ ಮಧ್ಯವರ್ತಿಗಳ ಜತೆ ಶಾಮೀಲಾದರೆ ಅಂಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಆನಂದ ಕುಮಾರ್, ವಿಶೇಷ ಸಾಮಾನ್ಯ ಸಭೆಗೆ ಒಂದು ದಿನ ಇರುವಂತೆ ನೊಟೀಸ್ ಕೊಡಲಾಗಿದೆ. ಸಿಬ್ಬಂದಿ ತಪ್ಪು ಮಾಡಿದರೆ ಅವರ ಸರ್ವೀಸ್‌ ಬುಕ್‌ನಲ್ಲಿ ನಮೂದು ಮಾಡಬೇಕು. ಗುತ್ತಿಗೆ ನೌಕರರು ಮಧ್ಯವರ್ತಿಗಳ ಜತೆ ಶಾಮೀಲಾದರೆ ಅಂಥ‌ ನೌಕರರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಬಿಜೆಪಿಯ ಅಮೃತ್ ರಾಜ್ ಪುರಸಭೆ ಆಡಳಿತ ವ್ಯವಸ್ಥೆಯೇ ಸಂಪೂರ್ಣ ಕುಸಿದಿದೆ. ಹಾಗಾಗಿ ಆಡಳಿತ ಪಕ್ಷದ ಸದಸ್ಯರೂ ಆಡಳಿತದ ವಿರುದ್ಧ ಟೀಕೆ ಮಾಡುವಂತಾಗಿದೆ ಎಂದರು. ರೇಣುಕಾ, ಜೈವರ್ಧನ್ ಇದಕ್ಕೆ ಧ್ವನಿಗೂಡಿಸಿದರು. ಎಂ.ವಿ. ಹರೀಶ್, ಜಗದೀಶ್, ಶೇಖ್ ಕಲೀಮುಲ್ಲಾ, ಶಿವಶಂಕರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕಾಮಗಾರಿಗಳಿಗೆ ಘಟನೋತ್ತರ ಅನುಮೋದನೆ ಕೊಡುವುದಕ್ಕೆ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಮೃತ್ ರಾಜ್ ಮಾತನಾಡಿ ಕೆಲಸ ಮಾಡಿದ ಮೇಲೆ ಈ ರೀತಿ ಮಂಜೂರಾತಿಗೆ ವಿರೋಧ ಇದೆ. ಸಭೆಯಲ್ಲಿ ನಿರ್ಧಾರ ಆದ ಮೇಲೆ ಕೆಲಸ ಮಾಡಬೇಕು. ಎಲ್ಲವನ್ನೂ ಹೀಗೆ ಮಾಡುವುದಾದರೆ ಸದಸ್ಯರು ಯಾಕೆ ಇರುವುದು ? ಅಧಿಕಾರಿಗಳು ಆಡಳಿತ ಮಂಡಳಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸದಸ್ಯರ ಹಕ್ಕು ಕಿತ್ತುಕೊಳ್ಳಲಾಗಿದೆ. ಈ ಸಂಬಂಧ ಕಾನೂನು ಹೋರಾಟ ಮಾಡಲಾಗುವುದು. ಎದುರಿಸಲು ಸಜ್ಜಾಗಿ ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಬಿಲ್‌ಗಳು ಪೆಂಡಿಂಗ್ ಇದೆ. ಆದರೆ ಕೆಲವರ ಬಿಲ್ ಮಾತ್ರ ಚುಕ್ತಾ ಮಾಡಲು‌ ತರಾತುರಿ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಆನಂದ ಕುಮಾರ್,

ಕಾಮಗಾರಿ ಘಟನೋತ್ತರ ಮಂಜೂರು ಈ ಸಭೆಯಲ್ಲಿ ಕೈ ಬಿಡಬೇಕು. ಈಗ ಕೊಡುತ್ತಿರುವ ವಿವರಣೆ ತೃಪ್ತಿಕರವಾಗಿಲ್ಲ‌. ಮುಂದಿನ ಸಭೆಯಲ್ಲಿ ಮಾಹಿತಿ ಕೊಡಬೇಕು. ಬಿಲ್ ಕೊಡದೇ ಇರುವುದರಿಂದ ಗುತ್ತಿಗೆದಾರರು ದನ, ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದಾರೆ‌. ಅಧ್ಯಕ್ಷರ ಗಮನಕ್ಕೆ ಇಲ್ಲಿಯ ವಿಷಯಗಳು ಬರುತ್ತಿದೆಯಾ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗಿರೀಶ್ ಅಧ್ಯಕ್ಷರ ಗಮನಕ್ಕೆ ತಂದು ಎಲ್ಲಾ ಕೆಲಸ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್, ನೀರು ಶುದ್ದೀಕರಣ ಘಟಕ, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಹೀಗೆ 3 ಕಾಮಗಾರಿಗೆ ಮಾತ್ರ ಘಟನೋತ್ತರ ಮಂಜೂರಾತಿ ತೆಗೆದುಕೊಳ್ಳಲಾಗಿದೆ. ಪುರಸಭೆಯಲ್ಲಿ ಸಿಬ್ಬಂದಿ‌ ಕೊರತೆ ಇದೆ. ಶಾಸಕರ ಮೂಲಕ ಸಿಬ್ಬಂದಿ‌ ಕೊಡಿಸಿ ಎಂದರು.

ಶೇಖ್  ಕಲೀಮುಲ್ಲಾ ಮಾತನಾಡಿ, ಸದಸ್ಯರನ್ನು ಕರೆದುಕೊಂಡು ಹೋಗಿ ಕಾಮಗಾರಿ ಪರಿಶೀಲನೆ ನಡೆಸಬೇಕು. ನಂತರ ಅನುಮೋದನೆ ನೀಡಬೇಕು ಎಂದು ಸಲಹೆ ನೀಡಿದರು. ಪ್ರಮೋದ್ ಮುತ್ತಪ್ಪ ಮಾತನಾಡಿ ಆಯಾಯ ವಾರ್ಡ್ ಸದಸ್ಯರನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಬೇಕು. ಎಲ್ಲಾ ಬಿಲ್ ಹಂತ ಹಂತವಾಗಿ ಕೊಡಬೇಕು ಎಂದು ಹೇಳಿದರು.

ಜಗದೀಶ್ ಧ್ವನಿಗೂಡಿಸಿ ಘಟನೋತ್ತರ ಮಂಜೂರಾತಿ ಸರಿಯಲ್ಲ. ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ವೆಂಕಟೇಶ್ವರ ಥಿಯೇಟರ್ ಸ್ಥಳದ ಬಗ್ಗೆ ಚರ್ಚೆ ನಡೆದು ಥಿಯೇಟರ್, ಬಾರ್ ಮತ್ತು ರೆಸ್ಟೋರೆಂಟ್ ಬಿಟ್ಟು ಬೇರೆ ಉದ್ದೇಶಕ್ಕೆ ಈ ಸ್ಥಳ ಬಾಡಿಗೆಗೆ ಕೊಡಬಹುದು. ಬಾಡಿಗೆ ಕೊಡುವ ಸಂದರ್ಭ ಪುರಸಭೆಗೆ ಆದಾಯ ಬರುವ ರೀತಿಯಲ್ಲಿ ಯೋಜಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.

ನಗರದಲ್ಲಿ ನಾಯಿ ಹಾವಳಿ ಹೆಚ್ಚಾಗಿರುವ ಬಗ್ಗೆ ನವೀನ್ ಪ್ರಸ್ತಾಪಿಸಿದರು. ಪ್ರಕಾಶ್, ರೇಣುಕಾ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯಾದಿಕಾರಿ ಉದಯ, ನಾಯಿಗಳ ಹಾವಳಿ ತಡೆಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಪರಿಣಾಮಕಾರಿ ಕ್ರಮಗಳಿಗೆ ಪ್ರಾಣಿದಯೆ ಸಂಘದವರು ಅಡ್ಡಿ ಮಾಡುತ್ತಾರೆ ಎಂದು ಅಸಹಾಯಕತೆ ತೋಡಿಕೊಂಡರು.

ಶಿವಶಂಕರ್ ಮಾತನಾಡಿ  ಪೌರಕಾರ್ಮಿಕರಿಗೆ ಬೆಳಗ್ಗೆ ಉತ್ತಮ ತಿಂಡಿ‌ಕೊಡಬೇಕು ಎಂದು ಸಲಹೆ ನೀಡಿದರು.

ಪ್ರಮೋದ್ ಮುತ್ತಪ್ಪ ಮಾತನಾಡಿ ಬೆಳಗ್ಗಿನ ತಿಂಡಿ ವ್ಯವಸ್ಥೆ ಇಂದಿರಾ ಕ್ಯಾಂಟೀನ್‌ಗೆ ವಹಿಸಿದರೆ ಉತ್ತಮ ಎಂದರು.

ಆನಂದ ಕುಮಾರ್ ಮಾತನಾಡಿ ಪೌರ ಕಾರ್ಮಿಕರಿಗೆ ಆಹಾರ ಕೊಡಲು ಸದಸ್ಯರ ಗೌರವ ಧನ ಬೇಕಾದರೂ ಬಳಸಿಕೊಳ್ಳಿ ಎಂದು ಹೇಳಿದರು.

ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸ್ಥಾಯಿ ಸಮಿತಿ ಅದ್ಯಕ್ಷ ಎಂ.ಬಿ. ಸುರೇಶ್, ಸದಸ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net