

ಮಡಿಕೇರಿ:
ಜನರಿಗೆ ತೊಂದರೆ ಆಗದಂತೆ ಮಳೆಗಾಲದ ಮುಂದಿನ 40 ದಿನಗಳ ಅವಧಿಯಲ್ಲಿ ಮುನ್ನೆಚ್ಚರಿಕೆ ಹಾಗೂ ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಂಜೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡು ಮಾತನಾಡಿದರು.
ಮಳೆಗಾಲದ ಮುಂದಿನ 40 ದಿನಗಳು ಬಹಳ ಮಹತ್ವದ್ದಾಗಿದೆ. ಈಗಾಗಲೇ ಹಿಂದಿನ ವರ್ಷಗಳ ಅನುಭವದ ಆಧಾರದ ಮೇಲೆ ಅಗತ್ಯವಿರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ತುರ್ತು ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಿಲ್ಲ. ಜಿಲ್ಲಾಧಿಕಾರಿ ಅನುಮತಿಯ ಆಧಾರದ ಮೇಲೆ ಅಗತ್ಯ ಕಾಮಾಗಾರಿಗಳನ್ನು ಕೈಗೊಳ್ಳಬೇಕು. ಹಿರಿಯ ಅಧಿಕಾರಿಗಳು ರಜೆ ತೆಗೆದುಕೊಳ್ಳದೇ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ಪಂಚಾಯ್ತಿಗಳಿಗೆ 25 ಸಾವಿರ ರೂ. ನೀಡಲಾಗುವುದು. ಜಿಲ್ಲಾಡಳಿತ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸಿದ್ದವಾಗಿರಬೇಕು. ಮುಂದಿನ 10 ದಿನಗಳಲ್ಲಿ ಅಂಗನವಾಡಿ, ಶಾಲೆಗಳು, ವಸತಿ ಶಾಲೆಗಳು, ಸರ್ಕಾರಿ ಹಾಸ್ಟೇಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.