

ಮಡಿಕೇರಿ:
ಕೊಡಗು ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬAಧಿಸಿದ ‘ಪ್ರಗತಿ ಪರಿಶೀಲನಾ ಸಭೆ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆಯಿತು.
ಪ್ರಮುಖವಾಗಿ ಫಾರಂ 3, ಎ ಖಾತಾ, ಬಿ ಖಾತಾ’ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಚರ್ಚೆ ನಡೆಯಿತು. ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಎ ಖಾತಾ, ಬಿ ಖಾತಾ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಪ್ರಸ್ತಾಪಿಸಿದರು. ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯ ಅರುಣ್ ಶೆಟ್ಟಿ ಕೂಡ ಈ ವಿಷಯದ ಬಗ್ಗೆ ಮಾತಾಡಿ ಕಳೆದ 15 ವರ್ಷಗಳಿಂದ ಕಂದಾಯ ಪಾವತಿಸಿರುವ ರಸೀತಿಯನ್ನು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಹೀಮ್ ಖಾನ್, ಎ ಖಾತಾ, ಬಿ ಖಾತಾವನ್ನು ಜನರಿಗೆ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದ್ಯತೆ ವಿಷಯ ಎಂಬುದನ್ನು ಮರೆಯಬಾರದು. ಜನರು ಇರುವಲ್ಲಿಗೆ ಹೋಗಿ ಕೊಡಬೇಕು. ಜನರೇ ಕಚೇರಿಗೆ ಬಂದಾಗ ಅಲೆದಾಡಿಸದೇ ತ್ವರಿತವಾಗಿ ವಿತರಣೆ ಮಾಡಬೇಕು ಎಂದು ಸೂಚಿಸಿದರು. ಅಧಿಕಾರಿಗಳ ಧೋರಣೆ, ಗುರಿ ಮುಟ್ಟದ ನಗರೋತ್ಥಾನ ಯೋಜನೆ ಕುರಿತು ಅತೃಪ್ತಿ ವ್ಯಕ್ತಪಡಿಸಿದರು.
ಶಾಸಕ ಡಾ. ಮಂತರ್‌ಗೌಡ ಮಡಿಕೇರಿಯಲ್ಲೂ ಹೈಟೆಕ್ ನಗರಸಭೆ ನಿರ್ಮಿಸಬೇಕು ಎಂದು ಸಚಿವರಲ್ಲಿ ಕೋರಿದರು. ಈಗ ಇರುವ ಕಟ್ಟಡ ಹೊಸತಾಗಿದ್ದರೂ, ಅದು ಹೈಟೆಕ್ ಆಗಿಲ್ಲ. ಹಳೆಯ ತಾಲೂಕು ಕಚೇರಿಯ ಜಾಗ ನೀಡಿದರೆ ಅಲ್ಲೊಂದು ಹೈಟೆಕ್ ನಗರಸಭೆ ನಿರ್ಮಿಸಬಹುದು ಎಂದರು.
ಮಡಿಕೇರಿ ಕಾವೇರಿ ಕಲಾಕ್ಷೇತ್ರವನ್ನು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸುಸಜ್ಜಿತವಾದ ವಾಹನ ನಿಲುಗಡೆಯೂ ಬೇಕಿದೆ. ಕನಿಷ್ಠ ಎಂದರೂ ಇನ್ನೂ 6ರಿಂದ 7 ಕೋಟಿ ರೂ. ಬೇಕು. ಈ ಹಣವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿಕೊಡಬೇಕು ಎಂದೂ ಮನವಿ ಮಾಡಿದರು.
ಮಡಿಕೇರಿ ಸ್ಟೋನ್ ಹಿಲ್ ಮೇಲಿರುವ ಹಳೆಯ ತ್ಯಾಜ್ಯ ವಿಲೇವಾರಿಗೆ ಇನ್ನಷ್ಟು ಹಣ ಬೇಕಿದೆ ಎಂದು ಬೇಡಿಕೆ ಇಟ್ಟರು. ಕಸ ವಿಂಗಡಿಸುವ ಯಂತ್ರವನ್ನು ಗುಡ್ಡದ ಮೇಲೆ ತರುವುದೇ ಪ್ರಯಾಸದ ಕೆಲಸವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಹಾಗೂ ಈಗಲೂ ನಿರಂತರವಾಗಿ ನಿತ್ಯವೂ ಹೆಚ್ಚಿನ ಕಸ ಅಲ್ಲಿಗೆ ಬರುತ್ತಿರುವುದರಿಂದ ಕಸ ವಿಲೇವಾರಿ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಹೀಮ್ ಖಾನ್, ಈಗ ಇರುವ ಹಣದಲ್ಲಿ ಕೆಲಸಗಳು ಆಗಲಿ. ಇನ್ನಷ್ಟು ಹಣವನ್ನು 2ನೇ ಹಂತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಕೇವಲ ಒಂದೇ ಒಂದು ಕಾಮಗಾರಿಯಷ್ಟೇ ಮುಗಿದಿರುವುದು, ಇನ್ನೂ 20 ಕಾಮಗಾರಿಗಳು ಟೆಂಡರ್ ಹಂತದಲ್ಲೇ ಇರುವುದಕ್ಕೆ ರಹೀಮ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ಉಳಿದೆಲ್ಲ ವಿಭಾಗದಲ್ಲಿ ಅಧಿಕಾರಿಗಳು ಸಮಾಧಾನಕರಾದ ಪ್ರಗತಿ ತೋರಿದ್ದರೂ, ನಗರೋತ್ಥಾನ ಯೋಜನೆಯ ಪ್ರಗತಿ ಇನ್ನಷ್ಟು ಚುರುಕುಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮನವಿ ಮಾಡಿದರು. ಶಾಸಕ ಡಾ.ಮಂತರ್‌ಗೌಡ ಸಹ ಇದಕ್ಕೆ ದನಿಗೂಡಿಸಿದರು.
ಅಧಿಕಾರಿಗಳು ಮಂಜೂರಾದ ಹುದ್ದೆಗಳು, ಖಾಲಿ ಹುದ್ದೆಗಳು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವವರ ವಿವರಗಳನ್ನು ಮಂಡಿಸಿದರು. ಒಟ್ಟು ಮಂಜೂರಾದ 9 ಕಿರಿಯ ಎಂಜಿನಿಯರ್ ಹುದ್ದೆಗಳ ಪೈಕಿ ಕೇವಲ ಒಬ್ಬರು ಮಾತ್ರವೇ ಕಾರ್ಯನಿರ್ವಹಿಸುವ ಕುರಿತು ವಿವರ ನೀಡಿದರು. ಆದರೆ, ಸಚಿವ ರಹೀಮ್ ಖಾನ್ ಅವರಿಂದ ಈ ಸಂಬAಧ ಯಾವುದೇ ಸ್ಪಷ್ಟ ಭರವಸೆ ಬರಲಿಲ್ಲ.
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ, ನಗರಾಭಿವೃದ್ಧಿ ಯೋಜನಾ ಶಾಖೆಯ ನಿರ್ದೇಶಕ ಬಸಪ್ಪ, ಮಡಿಕೇರಿ ನಗರಸಭೆಯ ಪೌರಾಯುಕ್ತ ರಮೇಶ್, ಕುಶಾಲನಗರದ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಸಭೆಯಲ್ಲಿ ಇದ್ದರು.