ಪ.ಜಾ., ಪ.ವ. ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ

meet
Published on

ಕುಶಾಲನಗರ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆ ಜಾರಿಗೆ ತರಬೇಕು ಎಂದು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಒತ್ತಾಯಿಸಿದರು. ಭಾನುವಾರ ಇಲ್ಲಿ ನಡೆದ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಸಂಘ ಸ್ಥಾಪನೆಯಾಗಿ 11 ವರ್ಷಗಳಾಗಿದ್ದು, ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಸಹಕಾರ ತುಂಬ ಅಗತ್ಯವಾಗಿದೆ. ಸಂಘ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿದೆ. ಎಲ್ಲಾ ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.

ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸುತ್ತಿರುವುದರಿಂದ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿ ಅವಶ್ಯಕತೆ ಇದ್ದು, ಇದಕ್ಕಾಗಿ ಜಾಗ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ. ನಿವೃತ್ತ ನೌಕರರ ಹಿತರಕ್ಷಣೆಗಾಗಿ ಸಂಘ ಸದಾ ಸಿದ್ಧ ಎಂದರು.

ಸಂಘದ ಕಾರ್ಯದರ್ಶಿ ರಾಮಯ್ಯ ಮಾತನಾಡಿ ಸಂಘದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದರು.

ಸಭೆಯಲ್ಲಿ 2024-25ನೇ ಸಾಲಿನ ಮಹಾಸಭೆ ನಡವಳಿ ಮಂಡನೆ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘದ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ತೀರ್ಮಾನಿಸಲಾಯಿತು. ಸಂಘ ಬೆಳವಣಿಗೆ ಕುರಿತು ಚರ್ಚೆ ನಡೆಯಿತು.

ಆರಂಭದಲ್ಲಿ ಮೃತಪಟ್ಟಿರುವ ಸದಸ್ಯರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಜೆ.ಕೆ. ಪ್ರತ್ಯಕ್ಷ, ಕೆ.ಎಂ. ನವ್ಯಾ ಹಾಗೂ ಸಂಘದ ಹಿರಿಯ ಸದಸ್ಯರಾದ ಸಿ.ಕೆ.ರಾಜು,ನಿಂಗರಾಜು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ 2025-28 ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸಿದ್ದಪ್ಪ, ಬಿ.ಸಿ. ರಾಜು, ಯು.ಟಿ. ರಾಮಯ್ಯ, ನಿಂಗರಾಜು, ರಮೇಶ್, ಎ.ಎಸ್. ಜೋಯ್ಯಪ್ಪ, ಚನ್ನಬಸಪ್ಪ, ಸರೋಜ, ರೇಣುಕಾ, ಚನ್ನರಾಜು, ವೆಂಕಮ್ಮ, ಎಸ್.ಬಿ. ಜಯಪ್ಪ, ಕೆ.ಆರ್. ನಾಗೇಶ್, ಟಿ.ಪಿ. ಸ್ವಾಮಿ, ಯಂ.ಡಿ.ಅಪ್ಪಾಜಿ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಪ್ರಕ್ರಿಯೆಯನ್ನು ಯು.ಟಿ. ರಾಮಯ್ಯ, ಎಂ.ಈ. ಮೋಹನ್ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net