ಮೇಕೆದಾಟು ವಿಚಾರದಲ್ಲಿ ತ.ನಾಡು ರಾಜಕಾರಣ: ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ

IMG_7679
Published on

ಶಿವಮೊಗ್ಗ: ಮೇಕೆದಾಟು ಅಣೆಕಟ್ಟೆ ಯೋಜನೆ ವಿಚಾರದಲ್ಲಿ ತಮಿಳುನಾಡು ರಾಜಕಾರಣ ಮಾಡುತ್ತಿದೆ. ಸುಪ್ರೀಂಕೋರ್ಟ್ ನಿರ್ಧಾರದಂತೆ ನಾವು ಯೋಜನೆಯನ್ನು ಮುಂದುವರಿಸಲಿದ್ದು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಕುರಿತು ತಮಿಳುನಾಡಿಗರು ಅರಿತುಕೊಂಡು ನಡೆದುಕೊಳ್ಳಬೇಕು ಎಂದರು.

ತ.ನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಯೋಜನೆ ವಿರೋಧಿಸಿ ಉಪವಾಸ ಮಾಡುತ್ತೇನೆಂದು ಹೇಳಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಣ್ಣಾಮಲೈ ಏನಾದರೂ ಮಾಡಿಕೊಳ್ಳಲಿ. ಅವರ ತಮ್ಮ ರಾಜ್ಯಕ್ಕೇನು ಬೇಕೋ ಅದನ್ನು ರಾಜಕೀಯವಾಗಿ ಯೋಚನೆ ಮಾಡುವುದು ತಪ್ಪಲ್ಲ. ಅಲ್ಲಿ ಹೋರಾಟ ಮಾಡಿ ಪಕ್ಷವನ್ನು ಕಟ್ಟಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ ಗೊಂದಲವಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾದ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್‌ಗೆ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ ಅವರಿಬ್ಬರು ಬೇರೆ ಖಾತೆ ಕೇಳಿರುವುದು ಗೊಂದಲವಲ್ಲ. ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರಷ್ಟೇ. ಈ ಬಗ್ಗೆ ಸಿಎಂ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net