ಕಣ್ಮನ ಸೆಳೆಯುವ ಮೇದೂರ ಅಬ್ಬಿ, ಬಡ್ಸತ್ತ್ ಕುಂಡ್

25mdkj4 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಳೆಗಾಲದಲ್ಲಿ ಮೈದುಂಬಿಕೊಂಡ ಕೊಡಗಿನ ಜಲಪಾತಗಳ ದೃಶ್ಯ ವೈಭವ ಸವಿಯಲು ಸಹಸ್ರಾರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈಗಾಗಲೇ ಪ್ರಖ್ಯಾತಿ ಹೊಂದಿರುವ ಅಬ್ಬಿ, ಮಲ್ಲಳ್ಳಿ, ಇರ್ಪು, ಚೇಲವಾರ ಜಲಪಾತಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.


ಪ್ರಕೃತಿ ಸೊಬಗು ತನ್ನೊಡಲಿನಲ್ಲಿಟ್ಟುಕೊಂಡಿರುವ ಸಾಕಷ್ಟು ಜಲಪಾತಗಳು ಅಪರಿಚಿತವಾಗಿ ಉಳಿದುಕೊಂಡಿವೆ. ಈ ಸಾಲಿನಲ್ಲಿ ಸೋಮ ವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಮೇದೂರ ಫಾಲ್ಸ್, ಬಡ್ಸತ್ತ್ ಕುಂಡ್ ಫಾಲ್ಸ್ ಸಹ ಸೇರಿವೆ. ಮಾಹಿತಿ ಕೊರತೆಯಿಂದ ವಿರಳ ಸಂಖ್ಯೆಯಲ್ಲಿ ಜನ ಈ ಫಾಲ್ಸ್‌ಗಳಿಗೆ ಭೇಟಿ ನೀಡುತ್ತಾರೆ.


ಇನ್ನೂ ಹೊರ ಜಗತ್ತಿಗೆ ಅಷ್ಟಾಗಿ ತೆರೆದುಕೊಳ್ಳದ ಈ ಜಲಪಾತಗಳನ್ನು ವೀಕ್ಷಿಸಲು ಸೋಮವಾರಪೇಟೆ ಹಾಗೂ ಮಡಿಕೇರಿಯಿಂದ ತೆರಳ ಬಹುದು. ಕೊಡಗಿನವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಪರಿಚಿತ ಜಲಪಾತದ ದೃಶ್ಯ ವೈಭವ ಸವಿದಿಲ್ಲ. ಚಿರಪರಿಚಿತ ಫಾಲ್ಸ್‌ಗಳಿಗೆ ಪ್ರತಿವರ್ಷ ಭೇಟಿ ನೀಡುವವರು ಹೊಸ, ಹೊಸ ಜಲಪಾತ ವೀಕ್ಷಿಸಲು ಆಸಕ್ತಿ ತೋರಬೇಕಾಗಿದೆ. ಪ್ರಖ್ಯಾತಿ ಹೊಂದಿರುವ ಜಲಪಾತಗಳಿ ಗಿಂತ ಹೆಚ್ಚಿನ ಆಕರ್ಷಣೆ ಅಪರಿಚಿತ ಜಲಪಾತಗಳಲ್ಲಿರುವುದು ವಿಶೇಷ.


ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇದೂರ ಅಬ್ಬಿ (ಸೂರ್ಲಬ್ಬಿ ಫಾಲ್ಸ್) ಇದೆ. ಮುಖ್ಯರಸ್ತೆ ಸಮೀಪದಲ್ಲಿಯೇ ಈ ಜಲಪಾತ ವನ್ನು ವೀಕ್ಷಿಸಬಹುದಾಗಿದೆ. ವರ್ಷಧಾರೆಗೆ ಮೇದೂರ ಅಬ್ಬಿ ದೃಶ್ಯ ವೈಭವ ಸೃಷ್ಟಿಸುತ್ತದೆ. ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ಸೂಜಿಗಲ್ಲಿನಂತೆ ಸೆಳೆಯುತ್ತದೆ.


ಮುಖ್ಯರಸ್ತೆಯಲ್ಲಿರುವ ಸೇತುವೆ ಮೇಲೆ ನಿಂತು ಜಲಪಾತದ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಬಹುದಾಗಿದೆ. ನೀರು ಕಡಿಮೆ ಇರುವ ಸಮಯದಲ್ಲಿ ಜಲಪಾತದ ಹಾದಿಯಲ್ಲಿ ನಡೆದುಕೊಂಡು ಬೆಟ್ಟ ಹತ್ತಬಹುದಾಗಿದೆ. ಪ್ರವಾಸಿಗರ ವೀಕ್ಷಣೆಗೆ ಮೇದೂರ ಅಬ್ಬಿ ಹೆಚ್ಚು ಸುರಕ್ಷಿತ ಜಲಪಾತವಾಗಿದೆ. ಮಾದಾಪುರದಿಂದ ೧೨ ಕಿಲೋಮೀಟರ್ ದೂರದಲ್ಲಿ ಈ ಜಲಪಾತವಿದೆ. ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಬಂದಲ್ಲಿ ೩೨ ಕಿಲೋಮೀಟರ್ ದೂರವಾಗುತ್ತದೆ.

ಬಡ್ಸತ್ತ್ ಕುಂಡ್
ಟಿಪ್ಪು ಸೈನಿಕರ ಸಂಹಾರ ಮಾಡಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಡ್ಸತ್ತ್ ಕುಂಡ್‌ಗೆ ೫೦ ಅಡಿ ಎತ್ತರದಿಂದ ಕೂವ ಹೊಳೆ ಧುಮ್ಮಿಕ್ಕುವು ದನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಜಲಪಾತವನ್ನು ಮೇಲ್ಭಾಗದಿಂದ ಹಾಗೂ ಕೆಳಗಿನಿಂದ ನೋಡುವ ಅವಕಾಶ ಇಲ್ಲಿ ಸಿಗುತ್ತದೆ. ೫೦ ಅಡಿ ಇಳಿದು ಹೋಗಿ, ಧುಮ್ಮಿಕ್ಕುವ ಜಲಪಾತವನ್ನು ಬಹಳ ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ಈ ಜಲಪಾತ ವೀಕ್ಷಿಸಲು ಬರುವವರು ಸ್ವಯಂ ನಿಯಂತ್ರಣ ಹೊಂದಿರುವುದು ಹಾಗೂ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಇಲ್ಲಿ ಯಾವ ಮಾರ್ಗದರ್ಶಿಯೂ ಮತ್ತು ರಕ್ಷಣಾ ಸಿಬ್ಬಂದಿ ಇರುವುದಿಲ್ಲ. ಬಡ್ಸತ್ತ್ ಕುಂಡ್ ಮಾದಾಪುರದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಬಂದಲ್ಲಿ ೩೦ ಕಿಲೋಮೀಟರ್ ದೂರವಾಗುತ್ತದೆ. ಮುಖ್ಯರಸ್ತೆಯಿಂದ ಇಲ್ಲಿಗೆ ೩೦೦ ಮೀಟರ್ ನಡೆದುಕೊಂಡು ಹೋಗಬೇಕು.

ಕಣ್ಮನ ಸೆಳೆಯುವ ಮಲ್ಲಳ್ಳಿ ಫಾಲ್ಸ್
ಮಾದಾಪುರದಿಂದ ಸೂರ್ಲಬ್ಬಿ ಮಾರ್ಗವಾಗಿ ತೆರಳಿದ್ದಲ್ಲಿ ಮೀನುಕೊಲ್ಲಿ ದೇವರಗುಂಡಿ, ಮೇದೂರ ಅಬ್ಬಿ, ಬಡ್ಸತ್ತ್ ಕುಂಡ್ ನೋಡಿ ಕೊಂಡು ಈಗಾಗಲೇ ಪ್ರಖ್ಯಾತಿ ಹೊಂದಿರುವ ಮಲ್ಲಳ್ಳಿ ಜಲಪಾತ ವೀಕ್ಷಿಸಲು ತೆರಳಬಹುದಾಗಿದೆ. ಮಲ್ಲಳ್ಳಿ ಜಲಪಾತ ವೀಕ್ಷಿಸಿದ ಬಳಿಕ ಯಡೂರಿನಲ್ಲಿರುವ ಬಾಚಳ್ಳಿ ಅಬ್ಬಿ ಜಲಪಾತ ವೀಕ್ಷಿಸಬಹುದಾಗಿದೆ.

ದೇವರಗುಂಡಿ
ಮಾದಾಪುರದಿಂದ ಸೂರ್ಲಬ್ಬಿ ಮಾರ್ಗದಲ್ಲಿ ೩ ಕಿಲೋಮೀಟರ್ ತೆರಳಿದ್ದರೆ ಮೀನುಕೊಲ್ಲಿ ಸಿಗುತ್ತದೆ. ಇಲ್ಲಿರುವ ದೇವರಗುಂಡಿಯಲ್ಲಿ ನೂರಾರು ದೇವರ ಮೀನುಗಳನ್ನು ವೀಕ್ಷಿಸಬಹುದಾಗಿದೆ. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತೋಕ್ಲು ಗ್ರಾಮದಲ್ಲಿರುವ ಶ್ರೀ ಭದ್ರಕಾಳಿ ದೇವಾಲಯಕ್ಕೆ ಸೇರಿದ ದೇವರಗುಂಡಿ ಇದಾಗಿದೆ. ದೇವಾಲಯಕ್ಕೆ ಸೇರಿದ ಪ್ರದೇಶದಲ್ಲಿರುವ ಮೀನುಗಳಾಗಿರುವುದರಿಂದ ಯಾರೂ ಇಲ್ಲಿ ಮೀನುಗಳನ್ನು ಹಿಡಿಯುವುದಿಲ್ಲ.

**
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಲ್ಲಳ್ಳಿ, ಮೇದೂರ ಫಾಲ್ಸ್ ಸೇರಿದ್ದಂತೆ ಸಾಕಷ್ಟು ಜಲಪಾತಗಳಿವೆ. ಚಾರಣಕ್ಕೆ ಸೂಕ್ತವಾಗಿರುವ ಪುಷ್ಪಗಿರಿ ಬೆಟ್ಟ ಪ್ರದೇಶವಿದೆ. ಮಾಹಿತಿ ಕೊರತೆಯಿಂದ ಸೋಮವಾರಪೇಟೆ ತಾಲೂಕು ಭಾಗದಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಬರುತ್ತಿಲ್ಲ. ಮಹೇಶ್ ತಿಮ್ಮಯ್ಯ, ಅಧ್ಯಕ್ಷರು, ಚೌಡ್ಲು ಗ್ರಾಮ ಪಂಚಾಯಿತಿ.

ಟಿಪ್ಪು ಸೈನಿಕರು ದಾಳಿ ನಡೆಸಿದ್ದ ವೇಳೆ ಊರಿನ ಹಿರಿಯರು ದೇವರನ್ನು ಪ್ರಾರ್ಥಿಸುತ್ತಾರೆ. ಆವಾಗ ದೇವಾಲಯದ ಬಾಗಿಲು ತೆರೆದು, ಜೇನು ನೊಣಗಳು ಟಿಪ್ಪು ಸೈನಿಕರ ಮೇಲೆ ದಾಳಿ ನಡೆಸುತ್ತವೆ. ಆ ಸಂದರ್ಭ ಸೈನಿಕರು ಬಡ್ಸತ್ತ್ ಕುಂಡ್‌ಗೆ ಬಿದ್ದು ಸಾವನ್ನಪ್ಪುತ್ತಾರೆ. ಈ ಇತಿಹಾಸಿಕ ಹಿನ್ನೆಲೆ ಬಡ್ಸತ್ತ್ ಕುಂಡ್‌ಗೆ ಇದೆ. ನಾಪಂಡ ಅರುಣ್, ಸ್ಥಳೀಯರು, ಸೂರ್ಲಬ್ಬಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net