

ಹರಿಹರ: ಪ್ರಸ್ತುತ ನಾವು ಯಾಂತ್ರಿಕ ಮತ್ತು ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದು, ಇದರಿಂದ ಹೊರಬರಲು ಯೋಗಾಸನ ಪ್ರಾಣಾಯಾಮದ ಅವಶ್ಯಕತೆ ಇದೆ ಎಂದು ಶಿಬಾರ ವೃತ್ತದ ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ಎನ್. ಮಹೇಶ್ ಅಭಿಪ್ರಾಯಪಟ್ಟರು.
ನಗರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ಆಶ್ರಯದಲ್ಲಿ ನಡೆದ ಉಚಿತ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಮನುಷ್ಯ ಆರೋಗ್ಯವಂತನಾಗಿ, ಮಾನಸಿಕ ಶಾರೀರಿಕ, ಭೌದ್ಧಿಕವಾಗಿ ಸದೃಢವಾಗಿರಲು ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದವುಗಳ ಅವಶ್ಯಕತೆ ಇದೆ. ಇಲ್ಲಿನ ಸುತ್ತಮುತ್ತಲಿನ ಜನಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಪತಂಜಲಿ ಸಂಸ್ಥೆ ಮುಂದಾಗಿರುವುದು ಸಂತೋಷಕರ ವಿಷಯ ಎಂದು ಹೇಳಿದರು.
ಕರ್ನಾಟಕ ಶ್ರೀ ಪತಂಜಲಿ ಯೋಗ ಫೌಂಡೇಶನ್ ಸದಸ್ಯ ಪೂರ್ವಾಚಾರಿ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮ ಪ್ರತಿನಿತ್ಯ ಒಂದು ಗಂಟೆ ಮಾಡುವ ಅಭ್ಯಾಸ ಮಾಡಿಕೊಂಡರೆ ವೈದ್ಯರಿಂದ ದೂರವಿರಲು ಸಹಕಾರಿ ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಡಾ. ರಾಮಚಂದ್ರಣ್ಣ ಮಾತನಾಡಿ, ಹರಿಹರ ನಗರದಲ್ಲಿ ಸೆ.12ರಿಂದ ಮುಂದಿನ 48 ದಿನಗಳವರೆಗೆ ಬೆಳಗ್ಗೆ 5.30ರಿಂದ 7ರ ವರೆಗೆ ಶಿಬಾರ ವೃತ್ತ, ಬಿರ್ಲಾ ಕಲ್ಯಾಣ ಮಂಟಪದಲ್ಲಿ ಉಚಿತ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನಡೆಯಲಿವೆ. ಶಿಕ್ಷಣಾರ್ಥಿಗಳಾಗಿ ಬರುವವರಿಗೆ ಯಾವುದೇ ಶುಲ್ಕವಿಲ್ಲ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ಕಮಿಟಿ ಕಾರ್ಯದರ್ಶಿ ಜಗದೀಶ್, ಖಜಾಂಚಿ ಅಣ್ಣಪ್ಪ ಶಾವಿ, ಸದಸ್ಯರಾದ ಎರೆಸೀಮಿ ಪಾಲಾಕ್ಷ, ವಿನೋದ ಇತರರು ಭಾಗವಹಿಸಿದ್ದರು.