

ಲಕ್ಷ್ಮೇಶ್ವರ: ಧ್ಯಾನವನ್ನು ಇಂದು ಉತ್ತಮ ಆರೋಗ್ಯಕ್ಕಾಗಿ, ಮನಸಿನ ನಿಯಂತ್ರಣಕ್ಕಾಗಿ ಮಾಡುತ್ತಿದ್ದು, ಧ್ಯಾನವು ವ್ಯಕ್ತಿಯನ್ನು ಸ್ವಯಂ ಶಿಸ್ತಿನ ಕಡೆಗೆ ಕರೆದುಕೊಂಡು ಹೋಗುತ್ತದೆ. ನಿತ್ಯ ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಒತ್ತಡದಿಂದ ಮುಕ್ತಿ ಸಿಗುತ್ತದೆ ಎಂದು ಶಿಕ್ಷಕಿ ಡಾ.ಜಯಶ್ರೀ ಕೋಲಕಾರ ಹೇಳಿದರು.
ಪಟ್ಟಣದ ಬಿಸಿಎನ್ ವಿದ್ಯಾ ಸಂಸ್ಥೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವಧ್ಯಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಧ್ಯಾನದಿಂದ ಮಾನಸಿಕ ಸ್ಥಿರತೆ ಮತ್ತು ಸಮತೋಲನ ಸಾಧಿಸಬಹುದು. ಧ್ಯಾನದ ಮಹತ್ವ ಮತ್ತು ಪ್ರಯೋಜನವನ್ನು ಅರಿತುಕೊಳ್ಳಬೇಕು’ ಎಂದರು.
ಯೋಗ ಶಿಕ್ಷಕಿ ಕಾವ್ಯಾ ವಡಕಣ್ಣವರ ಮಾತನಾಡಿ, ಧ್ಯಾನ ಎಂದರೆ ಮುಕ್ತಿ. ನಮ್ಮ ದೇಹದ ಮೇಲಿನ ನಿಯಂತ್ರಣಕ್ಕೆ ಧ್ಯಾನ ಅತ್ಯಂತ ಅವಶ್ಯ. ನಮ್ಮ ಉಸಿರೆ ನಮ್ಮ ಗುರು ನಮ್ಮ ಮನಸನ್ನು ನಿಯಂತ್ರಣದಲ್ಲಿಟ್ಟು ಧ್ಯಾನ ಮಗ್ನರಾದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಪ್ರಕಾಶ ವಡಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಾ.ಬೆಳವಗಿ, ಉಮೇಶ ಮ್ಯಾಗೇರಿ, ಮೈತ್ರಾದೇವಿ ಹಿರೇಮಠ, ವೀಣಾ ಹತ್ತಿಕಾಳ, ಶಿವಲೀಲಾ ಚೆಕ್ಕಿ, ನಂದಿನಿ ಮಾಳವಾಡ, ಅಕ್ಕಮ್ಮ ಕಳಸದ, ಮಧು ಗಾಂಧಿ, ಮಲ್ಲಮ್ಮ, ಗೀತಾ ಹುಲಬಜಾರ ಇತರರಿದ್ದರು.