5 ವರ್ಷವಾದರೂ ಮುಗಿಯದ ಕಟ್ಟಡ ಕಾಮಗಾರಿ

Untitled design (1)
ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವ ಮೇದಿನಾಪುರ ಸರ್ಕಾರಿ ಶಾಲೆಯ ಹೊರನೋಟ.
Published on

ಹಟ್ಟಿಚಿನ್ನದಗಣಿ: ಕೋಠಾ ಗ್ರಾಪಂ ವ್ಯಾಪ್ತಿಯ ಮೇದಿನಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಅವಧಿ ಒಳಗಡೆ ಪೂರ್ಣಗೊಳ್ಳದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.

ಕಳೆದ 5 ವರ್ಷಗಳಿಂದ ಪ್ರಗತಿಯಲ್ಲಿದೆ ಕಾಮಗಾರಿ

ಕಳೆದ 5 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಆದರೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲಾ ಖನಿಜ ಪ್ರತಿಷ್ಠಾನದ (ಡಿಎಂಎಫ್) 60 ಲಕ್ಷ ರೂ. ವೆಚ್ಚದಲ್ಲಿ 6 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕಳೆದ 54 ತಿಂಗಳಿಂದ 6 ಕೊಠಡಿಗಳ ಕಾಮಗಾರಿ ಅರೆಬರೆ ಮಾಡಲಾಗಿದೆ. ಕೊಠಡಿಗಳಿಗೆ ಸುಣ್ಣ-ಬಣ್ಣ ಬಳಿದಿಲ್ಲ. ಬಾಗಿಲು, ಕಿಟಕಿಗಳನ್ನು ಕೂಡ ಅಳವಡಿಸಿಲ್ಲ. ಶಾಲಾವಾಧಿ ಮುಗಿದ ನಂತರ ಪುಂಡ-ಪೋಕರಿಗಳಿಗೆ ಹೇಳಿ ಮಾಡಿಸಿದಂತಿದೆ ಕಟ್ಟಡವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಹಟ್ಟಿ-ಲಿಂಗಸುಗೂರು ರಸ್ತೆಗೆ ಹೊಂದಿಕೊಂಡಿರುವ ಶಾಲೆಯಲ್ಲಿ ಆಟದ ಮೈದಾನವಿಲ್ಲ. ವಿದ್ಯಾರ್ಥಿಗಳು ಊಟಕ್ಕೆ ಕುಳಿತುಕೊಳ್ಳಲು ಸಮರ್ಪಕ ಸ್ಥಳವಿಲ್ಲ. ಇದರಿಂದಾಗಿ ಶಾಲೆ ಮುಂದಿನ ಗಿಡವನ್ನು ವಿದ್ಯಾರ್ಥಿಗಳು ಆಶ್ರಯಿಸಿದ್ದಾರೆ. ಶಾಲೆಯಲ್ಲಿ 362 ವಿದ್ಯಾರ್ಥಿಗಳಿದ್ದು, ತರಗತಿ ಕೊಠಡಿಗಳಿಲ್ಲದೆ ಪರದಾಡುವಂತಾಗಿದೆ.

ಆಟದ ಮೈದಾನವಿಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಕಿರಿದಾದ ಮೈದಾನದಲ್ಲಿ ಕಟ್ಟಡ ನಿರ್ಮಾಣದ ಮರಳು, ಗ್ರಾನೈಟ್, ಟೈಲ್ಸ್‌ಗಳು ಬಿದ್ದಿರುವುದರಿಂದ ವಿದ್ಯಾರ್ಥಿಗಳು ಪ್ರಾರ್ಥನೆಗೆ ನಿಲ್ಲಲು ಆಗುತ್ತಿಲ್ಲ. ಜಿಪಂನಿಂದ ನಡೆಯುತ್ತಿರುವ ಕಾಮಗಾರಿಗೆ 5 ಜನ ಗುತ್ತಿಗೆದಾರರು ಹಾಗೂ 6 ಜನ ಜೆಇಗಳು ಬದಲಾವಣೆಯಾಗಿರುವುದು ವಿಶೇಷ. ಅನುದಾನ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಂದರೆಯಾಗುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಮರ್ಪಕವಾಗಿದ್ದರೂ ಸ್ಥಳಾವಕಾಶದ ಕೊರತೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತಿದ್ದು, ಸಂಬಂಧಪಟ್ಟವರು ಗಮನಹರಿಸಿ ಕೊಠಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net