

ಮಂಡ್ಯ: ವೈದ್ಯ ವೃತ್ತಿ ಬಹಳ ಪವಿತ್ರವಾದದ್ದು. ವೈದ್ಯರಾಗುವ ಕನಸನ್ನು ಬಹಳಷ್ಟು ಜನ ಕಾಣುತ್ತಾರೆ. ಆದರೆ ಎಲ್ಲರೂ ಆಗಲು ಸಾಧ್ಯವಾಗುವುದಿಲ್ಲ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಮತ್ತು ಮೆಡಿಕಾನ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಒತ್ತಾಯದಿಂದ ಯಾವುದೇ ವೃತ್ತಿಯನ್ನು ಮಾಡಬಾರದು. ಆತನಿಗೆ ಸ್ವಂತ ಪ್ರಯತ್ನ, ಆಸಕ್ತಿ, ಶ್ರದ್ಧೆ ಇರಬೇಕು. ಅವನಿಗೆ ಏನು ಅನಿಸುತ್ತದೆ ಅದನ್ನೇ ಕಲಿಯಬೇಕು. ಎಷ್ಟೋ ಸಂದರ್ಭದಲ್ಲಿ ವೈದ್ಯರ ಮಕ್ಕಳೇ ವೈದ್ಯರಾಗಲು ಇಚ್ಚಿಸುವುದಿಲ್ಲ. ಅವರು ಇಂಜಿನಿಯರ್‌ಗಳಾಗಿರುತ್ತಾರೆ. ವೈದ್ಯರಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲವೂ ವೃತ್ತಿ ಮಾಡುತ್ತಿರುತ್ತಾರೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎ.ವಿ.ಚಿನಿವಾಲರ ಮಾತನಾಡಿ, ಸಂಘದ ಕಟ್ಟಡವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿರುವ ಡಾ. ನಂದೀಶ್ ಮತ್ತವರ ತಂಡವನ್ನು ಶ್ಲಾಘಿಸಿದರು. ಈ ಕಟ್ಟಡಕ್ಕಾಗಿ ಹಲವು ವೈದ್ಯರು ದೇಣಿಗೆ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು ವಿಶ್ವದಲ್ಲಿಯೇ ಅತಿ ದೊಡ್ಡ ಆಧುನಿಕ ವೈಜ್ಞಾನಿಕ ವೈದ್ಯ ಪದ್ಧತಿಯ ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸ್ವಯಂಪ್ರೇರಿತ ಸಂಸ್ಧೆಯಾಗಿರುತ್ತದೆ. ಇದು ವೈದ್ಯರ ಹಿತಾಸಕ್ತಿ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದರು.
ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಪ್ರಚಾರ ಮತ್ತು ಪ್ರಗತಿ, ಭಾರತದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸುಧಾರಣೆ, ವೈದ್ಯಕೀಯ ವೃತ್ತಿಯ ಘನತೆ ಮತ್ತು ಗೌರವ ಕಾಪಾಡುವುದು ಸಂಘದ ಉದ್ದೇಶ. 1998 ರಲ್ಲಿ ಕೇವಲ 222 ಜನ ಸದಸ್ಯರೊಂದಿಗೆ ಕೋಲ್ಕತ್ತಾದಲ್ಲಿ ಪ್ರಾರಂಭವಾದ ಸಂಘ 1989ರಲ್ಲಿ ದೆಹಲಿಗೆ ಸ್ಥಳಾಂತರವಾಯಿತು. ಈಗ ಇದರ ಸಂಖ್ಯಾ ಬಲ 3.5 ಲಕ್ಷ ಸದಸ್ಯರನ್ನು ಹೊಂದಿದೆ. 32 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1750 ಶಾಖೆ ಹೊಂದಿದೆ. ನಮ್ಮ ರಾಜ್ಯದಲ್ಲಿ 180 ಶಾಖೆಗಳಲ್ಲಿ 31 ಸಾವಿರ ಸದಸ್ಯರು ಇದ್ದಾರೆ ಎಂದು ವಿವರಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿದರು. ಐಎಂಎ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರೀಗೌಡ, ಡಿಎಚ್‌ಒ ಡಾ.ಕೆ.ಮೋಹನ್, ಡಾ.ಪಿ.ಎಂ.ಜಗದೀಶ್‌ಕುಮಾರ್, ಡಾ.ವಿ.ಎಲ್.ನಂದೀಶ್, ಡಾ.ಪ್ರದೀಪ್‌ಕುಮಾರ್ ಹೆಬ್ರಿ ಇತರರಿದ್ದರು.