’ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣ ಕಾರ್ಯಕ್ಕೆ ಚಾಲನೆ

17mdk07
Published on

ಮಡಿಕೇರಿ
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಿಲ್ಲೆಯ ಹಾರಂಗಿಯಲ್ಲಿ ಉದ್ದೇಶಿತ ಜೀವ ವೈವಿಧ್ಯ ಔಷಧ ಉದ್ಯಾನ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು. ಹಾರಂಗಿ ವೃಕ್ಷೋದ್ಯಾನವನ ಆವರಣದಲ್ಲಿ ಶಿಲಾನ್ಯಾಸ ಫಲಕ ಅನಾವಣಗೊಳಿಸಿ, ಸಾಂಕೇತಿಕವಾಗಿ ಔಷಧಿಯ ಗಿಡಗಳನ್ನು ನೆಡುವ ಮೂಲಕ ಉದ್ದೇಶಿತ ಯೋಜನೆಗೆ ಚಾಲನೆ ನೀಡಲಾಯಿತು.

ಔಷಧೀಯ ಸಸ್ಯಗಳನ್ನು ಬೆಳೆಸಿ, ಅವುಗಳ ಮಹತ್ವವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ ೨.೫ ಹೆಕ್ಟೇರ್ ಪ್ರದೇಶದಲ್ಲಿ ಜೀವ ವೈವಿಧ್ಯ ಔಷಧ ಉದ್ಯಾನ ನಿರ್ಮಿಸಲು ಮಂಡಳಿ ಮುಂದಾಗಿದೆ. ಈ ವೇಳೆ ಮಾತನಾಡಿದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೊಡಗಿನಲ್ಲಿ ಔಷಧೀಯ ಸಸ್ಯಗಳ ಉದ್ಯಾನ ಮಾಡಬೇಕೆಂದು ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ಆಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು, ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ. ನಮ್ಮಲ್ಲಿರುವ ಔಷಧ ಸಸ್ಯಗಳು ಹಾಗೂ ಅವುಗಳ ಮಹತ್ವದ ಬಗ್ಗೆ ನಮಗೆ ತಿಳಿದಿಲ್ಲ. ಔಷಧೀಯ ಸಸ್ಯ ಸಂಪತ್ತಿನ ಬಗ್ಗೆ ಜನರಿಗೆ ತಿಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.


ಹಾರಂಗಿ ಜಲಾಶಯ, ಆನೆ ಶಿಬಿರ, ವೃಕ್ಷೋದ್ಯಾನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಮುಂದಿನ ದಿನದಲ್ಲಿ ಔಷಧ ಉದ್ಯಾನ ಆದ ಬಳಿಕ ಪ್ರವಾಸಿಗರು ಅದರ ಲಾಭವನ್ನೂ ಪಡೆಯಬಹುದು. ಉದ್ಯಾನ ನಿರ್ಮಾಣದ ಬಳಿಕ ಅದರ ನಿರ್ವಹಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಪಂಚಾಯಿತಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಗಮನ ಸೆಳೆದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಔಷಧಿಯ ಉದ್ಯಾನ ನಿರ್ಮಾಣಕ್ಕೆ ಯೋಜನೆ ಜಾರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾತನಾಡಿ, ಪ್ರಪಂಚದಲ್ಲಿ ಒಟ್ಟು ೧೨ ಜೀವ ವೈವಿಧ್ಯದ ಹಾಟ್ ಸ್ಪಾಟ್‌ಗಳಿವೆ. ಅವುಗಳಲ್ಲಿ ಎರಡು ಭಾರತದಲ್ಲಿದ್ದು, ಪಶ್ಚಿಮ ಘಟ್ಟ ಪ್ರದೇಶ ಅವುಗಳಲ್ಲಿ ಒಂದಾಗಿದೆ. ಹಲವು ಬಗೆಯ ಔಷಧೀಯ ಸಸ್ಯಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿದೆ. ಪಶ್ಚಿಮ ಘಟ್ಟ ಮತ್ತು ಹಿಮಾಲಯ ಇಲ್ಲದಿದ್ದರೆ ಭಾರತ ಬರಡು ಪ್ರದೇಶವಾಗಿರುತ್ತಿತ್ತು ಎಂದರು.


ಅಭಿವೃದ್ಧಿ ಹಾಗೂ ಪರಿಸರ ಸಮತೋಲನದಿಂದ ಸಾಗಬೇಕು. ಕೊಂಚ ಏರುಪೇರಾದರೂ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ. ಹಾರಂಗಿಯಲ್ಲಿ ನಿರ್ಮಾಣವಾಗಲಿರುವ ಜೀವ ವೈವಿಧ್ಯ ಔಷಧ ಉದ್ಯಾನದಲ್ಲಿ ಮುಂದಿನ ಮುಂದಿನ ಮುಂಗಾರು ಆರಂಭದಿಂದ ಸಸ್ಯಗಳನ್ನು ನೆಡಲು ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದರು.


ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಎಸ್. ಅರೇಕಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಂ ಬಾಬು, ಶರಣಬಸಪ್ಪ, ಎಂ.ಜೆ. ಗೋವರ್ಧನ್ ಸಿಂಗ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ, ಲ್ಯಾಂಪ್ಸ್ ಅಧ್ಯಕ್ಷ ಚಂದ್ರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಮುಂತಾದವರು ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳು ಸ್ಥಳೀಯ ಶಿಬಿರದ ಆನೆಗಳಿಗೆ ಬಾಳೆಹಣ್ಣು, ಕಬ್ಬು, ಬೆಲ್ಲ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net