

ರಟ್ಟಿಹಳ್ಳಿ: ತಾಲೂಕಿನಲ್ಲಿ 86 ಡೆಂಘ ಪ್ರಕರಣಗಳು ಪತ್ತೆಯಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯಿತಿ ಸಹಕಾರದಿಂದ ಫಾಗಿಂಗ್ ಮಾಡಲಾಗಿದೆ. ಮನೆಮನೆಗಳಿಗೆ ಭೇಟಿ, ಆರೋಗ್ಯ ತಪಾಸಣೆ, ಡೆಂಘ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಜೆಡ್.ಆರ್. ಮಕನದಾರ್ ತಿಳಿಸಿದರು.
ಬುಧವಾರ ಏರ್ಪಡಿಸಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದರು. ಆರೋಗ್ಯ ಇಲಾಖೆಯಲ್ಲಿ ಸೂಕ್ತ ಔಷಧಗಳು ಲಭ್ಯವಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ವಸಂತಕುಮಾರ ತಿಳಿಸಿದರು.
ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿದೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಕಳೆದ ಸಾಲಿಗಿಂತ ಫಲಿತಾಂಶ ಕುಸಿದಿದೆ. ಶಾಲೆಗಳ ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಎಲ್ಕೆಜಿ ಮತ್ತು ಯುಕೆಜಿ ಶಾಲೆ ಪ್ರಾರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಮಾಹಿತಿ ನೀಡಿದರು.
ಆಡಳಿತಾಧಿಕಾರಿ ಬಿ.ವಸಂತ ಕುಮಾರ ಮಾತನಾಡಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು. ಕಳೆದ ಸಾಲಿಗಿಂತ ಈ ವರ್ಷ ಫಲಿತಾಂಶ ಕುಸಿದಿರುವುದಕ್ಕೆ ಕಾರಣ ತಿಳಿದು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಹನುಮಂತಪ್ಪ ಮಾತನಾಡಿ, ಗುಡ್ಡದಮಾದಾಪುರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಸರ್ವಜ್ಞ ಮತ್ತು ಬುಳ್ಳಾಪುರ-ಹಾಡ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ. ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸಿಡಿಪಿಒ ಜಯಶ್ರೀ ಪಾಟೀಲ ಮಾತನಾಡಿ, ರಟ್ಟಿಹಳ್ಳಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು 7 ಮತ್ತು ಸಹಾಯಕಿಯರ 7 ಹುದ್ದೆಗಳು ಖಾಲಿ ಇದೆ. ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ತಾ.ಪಂ. ಇಒ ಟಿ.ಆರ್. ಮಲ್ಲಾಡದ ಮಾತನಾಡಿ, ಕಳಪೆ ಬೀಜಗಳ ಮಾರಾಟಕ್ಕೆ ಕೃಷಿ ಇಲಾಖೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ರೈತರು ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಎಸ್.ಬಿ.ಐ. ಇತರೆ ಬ್ಯಾಂಕುಗಳಲ್ಲಿ ಆರೋಗ್ಯ ವಿಮೆ ಮಾಡಿಸಿದರೆ ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಆಡಳಿತಾಧಿಕಾರಿ ಬಿ.ವಸಂತ ಕುಮಾರ ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರತೆಪ್ಪ ಕೆ.ಎಚ್, ಪಿಡಬ್ಲ್ಯುಡಿ ಇಂಜಿನಿಯರ್ ಮಾಲತೇಶ ಕಲ್ಲಮ್ಮನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬಸಾಬ ನದಾಫ್, ಅರಣ್ಯ ಇಲಾಖೆಯ ಸಂತೋಷ ಆವಕ್ಕನವರ, ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ದೇವರಾಜ ಸಣ್ಣಕಾರ್ಗಿ, ಎಫ್.ಎನ್. ಮಕನದಾರ ಇತರರು ಇದ್ದರು.
ಕಳೆದ 2 ವರ್ಷದಿಂದ ಹಿರೇಮೊರಬ ಗ್ರಾ.ಪಂ. ವ್ಯಾಪ್ತಿಯ ಖಂಡೇಬಾಗೂರು ಗ್ರಾಮದಲ್ಲಿ ನಿವೇಶನಕ್ಕಾಗಿ ಅಲ್ಲಿನ ಫಲಾನುಭವಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ನಿವೇಶನವನ್ನು ನೀಡಲು ಕಾಯ್ದರಿಸಲಾಗಿದೆ. ಭೂಮಿಯನ್ನು ಮಂಜೂರು ಮಾಡಲು ಕಂದಾಯ ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. | ಟಿ.ಆರ್. ಮಲ್ಲಾಡದ ತಾಪಂ ಇಒ