ವೈದ್ಯರಿಂದಲೇ ರೆಮಿಡಿಸಿವಿರ್ ಔಷಧ ಬ್ಲ್ಯಾಕ್​ನಲ್ಲಿ ಮಾರಾಟ; ಡಾಕ್ಟರ್ ಸೇರಿ ಇಬ್ಬರ ಬಂಧನ

Remidisivir
Published on

ಬೆಂಗಳೂರು: ಕರೊನಾಗೆ ರೆಮಿಡಿಸಿವಿರ್ ಔಷಧ ಹೌದೋ ಅಲ್ಲವೋ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ಹಲವರು ಅದಕ್ಕಾಗಿ ಮುಗಿಬೀಳುತ್ತಿರುವುದು ಮುಂದುವರಿದಿದೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ಬೆಲೆಗೆ ರೆಮಿಡಿಸಿವಿರ್​ ಮಾರಾಟ ಮಾಡುತ್ತಿದ್ದಾರೆ. ದುರಂತವೆಂದರೆ ವೈದ್ಯರೊಬ್ಬರೇ ಈ ಕೃತ್ಯ ಎಸಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಲಭ್ಯ ಖಚಿತ ಮಾಹಿತಿ ಮೇರೆಗೆ ಪೊಲೀಸರು ಖಾಸಗಿ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ್ದು, ವೈದ್ಯರು ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಠಾಣೆಯ ಇನ್​ಸ್ಪೆಕ್ಟರ್ ಶೇಖರ್ ನೇತೃತ್ವದ ಕ್ರೈಂ ತಂಡ ಈ ದಾಳಿಯನ್ನು ನಡೆಸಿದೆ. ಜಿಗಣಿಯ ಸುಹಾಸ್​ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ.

ಬಡ ಕುಟುಂಬದ ಒಬ್ಬರಿಗೆ ಈ ಆಸ್ಪತ್ರೆಯಲ್ಲಿ ರೆಮಿಡಿಸಿವರ್ ಔಷಧ ನೀಡಲು 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಮಾಹಿತಿ ತಿಳಿದ ಪೊಲೀಸರ ತಂಡ, ಮಫ್ತಿಯಲ್ಲಿ ಆಸ್ಪತ್ರೆಗೆ ಹೋಗಿ ಎರಡು ರೆಮಿಡಿಸಿವಿರ್ ಇಂಜೆಕ್ಷನ್​ ಬೇಕು ಎಂದು ಕೇಳಿದ್ದಾರೆ. ಆಗ ಆಸ್ಪತ್ರೆಯವರು 30 ಸಾವಿರ ರೂ. ಕೊಡುವಂತೆ ಹೇಳಿದ್ದಾರೆ. ಅದರಂತೆ ಕೊಟ್ಟ ಹಣವನ್ನು ಸ್ವೀಕರಿಸುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುಹಾಸ್ ಆಸ್ಪತ್ರೆಯ ವೈದ್ಯ ಫಾರ್ಮನ್ ಅಲಿ ಹಾಗೂ ರಕ್ಷಿತ್ ಎಂಬವರು ಬಂಧಿತರು.

ಕಳೆದ ಬಾರಿ ಕೋವಿಡ್ ಸಮಯದಲ್ಲೂ ಈ ಆಸ್ಪತ್ರೆ ಕುರಿತು ಸಾಕಷ್ಟು ದೂರು ಕೇಳಿ ಬಂದಿತ್ತು. ಸುಹಾಸ್ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಕಷ್ಟು ಜನ ರೋಗಿಗಳು ಜೀವ ಕಳೆದುಕೊಂಡ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟದಲ್ಲಿ ಸಿಕ್ಕಿ ಬಿದ್ದಿದ್ದು, ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ಆಸ್ಪತ್ರೆಯ ಮುಖ್ಯಸ್ಥ ಜಗದೀಶ್ ಮೇಲೆ ಜಿಗಣಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net