

ವಿ.ಶಿವಾರೆಡ್ಡಿ ಬಂಗಾರಪೇಟೆ : ಬಂಗಾರಪೇಟೆ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಜಾನುವಾರುಗಳ ಔಷಧ ಕೊರತೆ ಎದುರಾಗಿದೆ.
ಜಾನುವಾರುಗಳಿಗೆ ಈ ಹಿಂದೆ ಪಶುಚಿಕಿತ್ಸಾಲಯದಲ್ಲೇ ಔಷಧ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಹೊರಗಡೆಯಿಂದ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ಲೂಕೋಸ್ ಒಂದನ್ನು ಬಿಟ್ಟರೆ ಇನ್ನುಳಿದ ಔಷಧವನ್ನು ಹೊರಗಿನಿಂದಲೇ ತರಬೇಕಿದ್ದು, ಜಾನುವಾರಗಳನ್ನು ರಸಿಕೊಳ್ಳಲು ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ.
ಈ ಹಿಂದೆ ಜಿಲ್ಲಾ ಕೇಂದ್ರದ ಪಶು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಿಂದ ಅವಶ್ಯವಿರುವ ಔಷಧ ಖರೀದಿಸಿ ಎಲ್ಲ ಪಶು ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗುತ್ತಿತ್ತು. ಆಗ ಅಷ್ಟಾಗಿ ಔಷಧ ಕೊರತೆ ಕಂಡು ಬರುತ್ತಿರಲಿಲ್ಲ. ಮೂರು ವರ್ಷಗಳಿಂದ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಿಗೆ ಔಷಧ ಸರಬರಾಜು ಮಾಡಲಾಗುತ್ತಿದೆ. ಮೂರು ವರ್ಷಗಳಿಂದ ಪಶು ಆಸ್ಪತ್ರೆಗೆ ಅವಶ್ಯ ಇರುವ ಔಷಧಗಳು ಪೂರೈಕೆಯಾಗದಿರುವುದೇ ಸಮಸ್ಯೆಗೆ ಕಾರಣವಾಗಿದೆ. ತಾಲೂಕಿನ ಯಾವುದೇ ಪಶು ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳು ಲಭಿಸದಂತಾಗಿದೆ.
ಸೂಕ್ತ ಕ್ರಮ ಅನಿವಾರ್ಯ : ಜಾನುವಾರುಗಳಿಗೆ ಹೊಟ್ಟೆ ಉಬ್ಬರ, ಭೇದಿ, ಕಾಲು ಬಾಯಿ ಜ್ವರ ಬಂದರೆ ವಿವಿಧ ಬಗೆಯ ಆಂಟಿ ಬಯೋಟಿಕ್ ಔಷಧ ಲಭ್ಯ ಇಲ್ಲ. ಕೋಳಿಗಳಿಗೆ ರೋಗ ಬಂದರೆ ಅದಕ್ಕೂ ಮೆಡಿಸಿನ್ ಇಲ್ಲ. ಕುರಿಗಳಿಗೆ ಇಟಿ, ಪಿಪಿಆರ್ ರೋಗ ಬಂದರೆ ಔಷಧ ಸಿಗುತ್ತಿಲ್ಲ. ಇದರಿಂದ ರೈತರು ಆರ್ಥಿಕವಾಗಿ ಸಮಸ್ಯೆ ಎದುರಿಸಬೇಕಾಗಿದೆ. ಔಷಧ ಕೊರತೆ ಇದೆ. ನಾವೇನು ಮಾಡಲು ಸಾಧ್ಯ? ಮೇಲಧಿಕಾರಿಗಳು ಕ್ರಮವಹಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಪರಿಸ್ಥಿತಿ ಬಗ್ಗೆ ಅಳಲು ತೋಡಿಕೊಂಡರು.
ಇತ್ತೀಚೆಗೆ ಕುರಿಗಳು ಒಂದೊಂದಾಗಿ ಕಾಯಿಲೆಗೆ ತುತ್ತಾಗುತ್ತಿದ್ದು, ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಬಂದರೆ ಮೃತಪಡುವ ಕುರಿಗಳಿಗೆ ಪಿಎಂ ಮಾಡಿ ಇನ್ಶೂರೆನ್ಸ್ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಈಗ ಒಂದೊಂದೇ ಕುರಿಗಳು ಸಾವಿನ ಕದ ತಟ್ಟುತ್ತಿರುವುದರಿಂದ ಕುರಿಗಾಹಿಗಳಲ್ಲಿ ಆತಂಕ ಶುರುವಾಗಿದೆ. ಮಳೆಗಾಲ ಮತ್ತು ಚಳಿಗಾಲ ಪ್ರಾರಂಭವಾಗಿರುವುದರಿಂದ ಮುಂಜಾಗ್ರತೆಯಾಗಿ ವಿವಿಧ ರೋಗಗಳು ಹರಡುವ ಮೊದಲೇ ಸೂಕ್ತ ಔಷಧ ದಾಸ್ತಾನುಗೊಂಡರೆ ಜಾನುವಾರು, ಕೋಳಿ, ಕುರಿಗಳನ್ನು ರೋಗಗಳಿಂದ ಗುಣಪಡಿಸಲು ಅನುಕೂಲವಾಗುತ್ತದೆ.
ಸಿಬ್ಬಂದಿಯೂ ಇಲ್ಲ : ಗ್ರಾಮೀಣ ಪ್ರದೇಶಗಳಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳು ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಲೇ ಇದೆ. ಮುಖ್ಯ ಪಶು ವೈದ್ಯಾಧಿಕಾರಿಗಳು, ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಹಿರಿಯ ಪಶು ವೈದ್ಯಕಿಯ ಪರಿವೀಕರು, ಪಶು ವೈದ್ಯಕಿಯ ಪರಿವೀಕರು ಮತ್ತು ಪಶು ವೈದ್ಯಕಿಯ ಸಹಾಯಕರ ಕೊರತೆಯು ನೇರವಾಗಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸೂಕ್ತ ಔಷಧ ಸಿಗುತ್ತಿಲ್ಲ. ಹೊರಗಡೆಯಿಂದ ಖರೀದಿ ಮಾಡಿ ತರಬೇಕು. ಸೂಕ್ತ ಔಷಧಿ ಇಲ್ಲದೆ ನನ್ನದೊಂದು ಕುರಿ ಚಿಕ್ಕಾಂಕಂಡಹಳ್ಳಿ ಆಸ್ಪತ್ರೆಯಲ್ಲಿ ಸತ್ತು ಹೋಗಿದೆ.ಔಷಧಿ ಇದ್ದಿದ್ದರೆ ಕುರಿ ಬದುಕುತ್ತಿತ್ತು.ಪಿಳ್ಳಪ್ಪ, ರೈತ, ವೇಣುಗೋಪಾಲಫುರ, ಬಂಗಾರಪೇಟೆ