

ಗೌರಿಬಿದನೂರು: ದೇಶದಲ್ಲೇ ಪ್ರಪ್ರಥಮವಾಗಿ ಡ್ರೋನ್ ಮೂಲಕ ಔಷಧ ಸಾಗಿಸುವ 45 ದಿನಗಳ ಪ್ರಾಯೋಗಿಕ ಪರೀಕ್ಷೆಗೆ ತಾಲೂಕಿನ ಶಂಭೂಕ ನಗರದಲ್ಲಿ ಸೋಮವಾರ ಚಾಲನೆ ಸಿಕ್ಕಿತು. ಮೊದಲ ದಿನ 2.5 ಕೆಜಿ ತೂಕ ಹೊಂದಿದ್ದ ಔಷಧ ಕಿಟ್ ಹೊತ್ತ ಡ್ರೋನ್, 2.5 ಕಿ.ಮೀ. ವೈಮಾನಿಕ ದೂರವನ್ನು 250 ಅಡಿ ಎತ್ತರದಲ್ಲಿ 7 ನಿಮಿಷದಲ್ಲಿ ತಲುಪಿತು. ಪ್ರವಾಹ, ಯುದ್ಧ, ಅಪಘಾತ ಇನ್ನಿತರ ತುರ್ತು ಸಂದರ್ಭಗಳಲ್ಲಿ ದೂರದ ಪ್ರದೇಶಗಳಿಗೆ ಔಷಧ, ರಕ್ತವನ್ನು ಡ್ರೋನ್ ಮೂಲಕ ಕ್ಷಿಪ್ರಗತಿಯಲ್ಲಿ ಸಾಗಿಸುವ ನಿಟ್ಟಿನಲ್ಲಿ ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಹಾಗೂ ಟಿಎಎಸ್ ಕಂಪನಿ ಹಾಗೂ ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ ಪ್ರಯೋಗ ನಡೆಸಲಾಗುತ್ತಿದೆ.
ಮೊದಲ ದಿನ ಶಂಭೂಕ ನಗರದಿಂದ 2.5 ಕಿ.ಮೀ (ವೈಮಾನಿಕ ದೂರ) ದೂರದಲ್ಲಿರುವ ಹುದೂತಿ ನಾಗಸಂದ್ರಕ್ಕೆ (ರಸ್ತೆ ಮಾರ್ಗ 7 ಕಿ.ಮೀ) ಡ್ರೋನ್ 7 ನಿಮಿಷಗಳಲ್ಲಿ ತಲುಪಿತು. ಇದೇ ರೀತಿ ಸುತ್ತಲ ಪ್ರದೇಶಗಳಲ್ಲಿ ಮೂರು ಪ್ರಯೋಗ ನಡೆಸಲಾಯಿತು. ಇದು ಯಶಸ್ವಿಯಾದರೆ ಕರೊನಾ ಲಸಿಕೆ ಸಾಗಣೆಗೂ ಬಳಸಬಹುದಾಗಿದೆ.
15 ಕಿ.ಮೀ ಗುರಿ: ಬಿಯಾಂಡ್ ವಿಜುವಲ್ ಸೈಟ್ ಆಫ್ ಲಾಸ್ (ಬಿವಿ ಲಾಸ್) ಅಂದರೆ ಕಣ್ಣಿಗೆ ಕಾಣದ ದೂರಕ್ಕೆ ಡ್ರೋನ್ಗಳ ಮೂಲಕ ರವಾನೆ ಮಾಡುವ ಪರೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ 2 ಮಾದರಿ ಡ್ರೋನ್ ಬಳಸಲಾಗುತ್ತಿದ್ದು, ಒಂದು ಡ್ರೋನ್ 15 ಕಿ.ಮೀ. ದೂರಕ್ಕೆ 1 ಕೆ.ಜಿ. ಹಾಗೂ ಮತ್ತೊಂದು 12 ಕಿ.ಮೀ ದೂರಕ್ಕೆ 2 ಕೆ.ಜಿ.ಸಾಮರ್ಥ್ಯದ ಸಾಮಗ್ರಿ ಸಾಗಿಸುವ ಪ್ರಯೋಗ ನಡೆಸಲಾಗುತ್ತಿದೆ. 35 ಮಂದಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟಿಎಎಸ್ ಕಂಪನಿ ಸಿಇಒ ಕೆ.ನಾಗೇಂದ್ರ ತಿಳಿಸಿದ್ದಾರೆ.