

ತುಮಕೂರು: ಭಾರತೀಯ ವೈದ್ಯ ಪದ್ಧತಿಗಳು ಕರೊನಾದಿಂದಾಗಿ ಮತ್ತಷ್ಟು ಪ್ರಖರತೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ತೋಟಗಾರಿಕೆ ಇಲಾಖೆ ರಸ್ತೆಯ ಉದ್ಯಾನದಲ್ಲಿ ಶನಿವಾರ ಜಿಲ್ಲಾ ಆಯುರ್ವೇದ ಪದವೀಧರ ವೈದ್ಯರ ಸಂಘವು ಪೌರಕಾರ್ಮಿಕರಿಗೆ ಆಯೋಜಿಸಿದ್ದ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಯುರ್ವೇದ, ಯುನಾನಿ, ಹೋಮಿಯೋಪಥಿ ಸೇರಿ ಹಲವು ಚಿಕಿತ್ಸಾ ಪದ್ಧತಿಗಳು ಇಂಗ್ಲಿಷ್ ಮೆಡಿಸಿನ್‌ನಿಂದಾಗಿ ದೂರವಾಗಿದ್ದವು, ಆದರೆ, ಕರೊನಾದಿಂದಾಗಿ ಜನರು ಪುರಾತನ ಚಿಕಿತ್ಸಾ ಪದ್ಧತಿಗಳತ್ತ ಹೊರಳುವಂತಾಗಿದೆ ಎಂದರು. ನಗರ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರು ಆರೋಗ್ಯದ ಕಡೆಗೂ ಗಮನಹರಿಸಬೇಕು. ಮುಂಜಾಗ್ರತಾ ಪರಿಕರಗಳನ್ನು ಬಳಸುವುದರಿಂದ ಶೇ.80 ರೋಗಗಳಿಂದ ದೂರ ಉಳಿಯಬಹುದು ಎಂದು ಸಲಹೆಯಿತ್ತರು.
ಭಾರತೀಯರಿಗೆ ಆಯುರ್ವೇದ ಹೊಸದಲ್ಲ. ನಮ್ಮಗಳ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಆಯುರ್ವೇದ ವೈದ್ಯರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ನೀಡುತ್ತಿದ್ದಾರೆ. ಕಿಟ್‌ನಲ್ಲಿರುವ ಔಷಧಗಳನ್ನು ವೈದ್ಯರು ಹೇಳಿದ ರೀತಿ ಬಳಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಮೇಯರ್ ಫರಿದಾಬೇಗಂ ತಿಳಿಸಿದರು. ಆಯುರ್ವೇದದಲ್ಲಿ ಮನುಷ್ಯನ ಎಲ್ಲ ರೋಗಗಳಿಗೂ ಔಷಧವಿದೆ. ಈಗಾಗಲೇ ಗುಬ್ಬಿ ಸೇರಿದಂತೆ ಹಲವು ಕಡೆ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಈ ಔಷಧ ನೀಡಿದ್ದು ಗುಣಮುಖರಾಗಿದ್ದಾರೆ. ಪ್ರಸ್ತುತ ನೀಡಿರುವ ಆರೋಗ್ಯ ಕಿಟ್‌ನಲ್ಲಿ ಇರುವ ಚೂರ್ಣ, ಮಾತ್ರೆಗಳನ್ನು ನಿಯಮಿತವಾಗಿ ಬಳಸುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು ಎಂದು ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲಕೆ ತಿಳಿಸಿದರು.
ಕಾರ್ಪೋರೇಟರ್ ವಿ.ಎಸ್.ಗಿರಿಜಾ, ಆಯುರ್ವೇದ ವೈದ್ಯರಾದ ಡಾ.ಚಿತ್ತರಂಜನ್, ಡಾ.ನಂಜುಂಡಪ್ಪ, ಡಾ.ಶಿಲ್ಪಾ, ಮುಖಂಡರಾದ ಸುರೇಶ್, ನಟರಾಜು, ಡಾ.ಶ್ರೀನಿವಾಸ್ ಇದ್ದರು.
ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಹೆಚ್ಚು ಬಳಕೆಗೆ ತರುವ ಹಾಗೂ ಮಹತ್ವ ಪರಿಚಯಿಸುವ ನಿಟ್ಟಿನಲ್ಲಿ ಟೂಡಾ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಮಾನಿಕೆರೆ ಅಂಗಳದಲ್ಲಿ ಆಯುರ್ವೇದ ಗಿಡಮೂಲಿಕೆಗಳ ಉದ್ಯಾನವನ ನಿರ್ಮಿಸಲಾಗುತ್ತಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ