ಕೋವಿಡ್ ಲಸಿಕೆ ಶೋಧದಲ್ಲಿ ಕನ್ನಡಿಗ, ಕೆನಡಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ

pravin
Published on

ಉಡುಪಿ: ಕೆನಡಾದಲ್ಲಿ ನೆಲೆಸಿರುವ ಉಡುಪಿ ಮೂಲದ ಫಾರ್ಮಾಸಿಸ್ಟ್ ವಿಜ್ಞಾನಿ ಡಾ.ಪ್ರವೀಣ್ ರಾವ್ ಕರೊನಾ ವೈರಸ್ ತೊಲಗಿಸುವ ಲಸಿಕೆ ಕಂಡುಹಿಡಿಯುವ ಭರವಸೆ ನೀಡಿದ್ದಾರೆ. ಕೆನಡಾದ ವಾಟರ್ ಲೂ ವಿಶ್ವವಿದ್ಯಾಲಯದಲ್ಲಿ ವಿಶ್ವದ ಗಮನ ಸೆಳೆಯುವ ಸಂಶೋಧನೆ ನಡೆಯುತ್ತಿದ್ದು, ಅವರೇ ನೇತೃತ್ವ ವಹಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

ಲಸಿಕೆ ಕಂಡುಹಿಡಿಯುವ ಪ್ರಯತ್ನ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೋವಿಡ್-19 ತಡೆಯುವ ಸಾಮರ್ಥ್ಯ ಟೈಪ್-2 ಡಯಾಬಿಟೀಸ್ ಔಷಧಕ್ಕೆ ಇದ್ದು, ಪ್ರಯೋಗದಿಂದಲೂ ಇದು ದೃಢಪಟ್ಟಿರುವುದು ತಿಳಿದುಬಂದಿದೆ.

ಜರ್ಮನಿಯ ವಿಜ್ಞಾನಿಗಳು ಕರೊನಾ ವೈರಸ್‌ನ ಮುಖ್ಯ ಪ್ರೊಟೀನ್ ರಚನೆ ಕಂಡುಹಿಡಿದಿದ್ದು, ವೈರಸ್ ದ್ವಿಗುಣಗೊಳ್ಳಲು ಪ್ರೊಟೀನ್ ಸಹಾಯ ಮಾಡುತ್ತದೆ. ಕೋವಿಡ್ ಪ್ರೊಟೀನ್ ಕ್ರಿಯೆಯನ್ನು ಔಷಧ ಮೂಲಕ ತಡೆದರೆ, ರೋಗ ತಡೆಯುವ ಸಾಧ್ಯತೆ ಇದೆ. ಹೀಗಾಗಿ ಇದರ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದೆವು ಎಂದು ಡಾ.ಪ್ರವೀಣ್ ಹೇಳುತ್ತಾರೆ.

ಜಗತ್ತಿನಲ್ಲಿ 5 ಸಾವಿರಕ್ಕೂ ಹೆಚ್ಚು ಔಷಧಗಳು ಲಭ್ಯವಿದೆ. ನಾವು ಎಲ್ಲ ಔಷಧಗಳ ಬಗ್ಗೆ ಸಂಶೋಧನೆ ಮಾಡಿದೆವು. ಈ ವೇಳೆ ಟೈಪ್-2 ಎಂಬ ಡಯಾಬಿಟೀಸ್ ರೋಗ ಗಮನಕ್ಕೆ ಬಂತು. ಈ ರೋಗಕ್ಕೆ ಬೇರೆ ಬೇರೆ ತರಹದ ಮದ್ದುಗಳಿವೆ. ಇದರ ಬಗ್ಗೆ ಸಂಶೋಧನೆ ಮಾಡುವಾಗ ಡಿಪಿಪಿ-4 ಇನ್ಹಿಬಿಟರ್ಸ್ ಎಂಬ ಒಂದು ವರ್ಗದ ಔಷಧ ಗಮನಕ್ಕೆ ಬಂತು. ಇವುಗಳ ಕೆಮಿಕಲ್ ರಚನೆ ನೋಡುವಾಗ ಅವುಗಳಿಗೆ ಕೋವಿಡ್-19 ಪ್ರೊಟೀನ್ ತಡೆಹಿಡಿಯುವ ಸಾಮರ್ಥ್ಯವಿದೆ ಎಂಬುದು ತಿಳಿಯಿತು ಎಂದು ವಿವರಿಸಿದ್ದಾರೆ.

ಸದ್ಯ ಪ್ರಾಥಮಿಕ ಸಂಶೋಧನೆಯಲ್ಲಿದ್ದು, ಮುಂದಿನ ಹಂತದಲ್ಲಿ ಕೋವಿಡ್ ಇರುವ ಸೆಲ್ ಲೈನ್ ಉಪಯೋಗಿಸಿ, ಅದಕ್ಕೆ ಟೈಪ್-2 ಡಯಾಬಿಟೀಸ್ ನೀಡುವ ಮದ್ದನ್ನು ಬಳಸಿ ಇದಕ್ಕೆ ಕರೊನಾ ತಡೆಯುವ ಶಕ್ತಿ ಇದೆಯೇ ಎಂಬುದನ್ನು ನೋಡುತ್ತೇವೆ. ಬಳಿಕ ಔಷಧ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಖಚಿತಪಡಿಸಿಕೊಂಡು ಮಾನವನ ಉಪಯೋಗಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ‘ದಿಗ್ವಿಜಯ ನ್ಯೂಸ್’ನೊಂದಿಗೆ ಪ್ರವೀಣ್ ರಾವ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೆರಂಪಳ್ಳಿಯವರು: ಪ್ರವೀಣ್ ರಾವ್ ಉಡುಪಿಯ ಪೆರಂಪಳ್ಳಿಯವರಾಗಿದ್ದು, ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ಓದಿದ್ದರು. ಪದವಿ ಮುಗಿಸಿ ಕೆನಡಾದಲ್ಲಿ ಪಿಎಚ್‌ಡಿ ಪದವಿ ಮುಗಿಸಿದ್ದಾರೆ. ಸದ್ಯ ಕೆನಡಾದ ವಾಟರ್ ಲೂ ಯೂನಿವರ್ಸಿಟಿಯ ಸ್ಕೂಲ್ ಆಫ್ ಫಾರ್ಮಸಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net