

ಮಡಿಕೇರಿ
ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರಗಳು ಯೋಜನೆ ರೂಪಿಸಬಹುದು. ಆದರೆ ಅದು ಯಶಸ್ವಿ ಆಗಬೇಕಾದರೆ ಫಲಾನುಭವಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಅರಣ್ಯ ಜಾಗೃತಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ಅಹಮದ್ ಶಾ ಹುಸೇನ್ ಹೇಳಿದರು. ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಆದಿ ಪೆಪ್ಪರ್ ಡಿಮೋ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಗರ್ವಾಲೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಆದಾಯ ದ್ವಿಗುಣ ಆಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ
ರೈತರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಕೃಷಿಕರು ತಮ್ಮ ಜಮೀನಿನಲ್ಲಿ ಇರುವ ವಿಶೇಷ ತಳಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಮೂಲಕ ಆರ್ಥಿಕ ಸಬಲತೆ ಸಾಧಿಸಬಹುದು. ಸಿದ್ದು ಹಲಸು ಸೇರಿದಂತೆ ಹಲವು ತಳಿಗಳನ್ನು ಅಭಿವೃದ್ಧಿಪಡಿಸಿದ ರೈತರ ಉದಾಹರಣೆಗಳು ಕರ್ನಾಟಕದಲ್ಲೇ ಸಿಗುತ್ತದೆ.
ಇರುವ ಜಾಗದಲ್ಲೇ ಆದಾಯ ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎನ್ನುವುದು ಸದ್ಯ ಬಹು ಚರ್ಚಿತ ವಿಷಯವಾಗಿದೆ. ಇದರ ಜತೆಯಲ್ಲಿ ಮಣ್ಣಿನ ಆರೋಗ್ಯ ನೋಡಿಕೊಳ್ಳುವುದು, ನೀರಿನ ನಿರ್ವಹಣೆಯೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ರೈತರು ತಮ್ಮ ಉತ್ಪನ್ನಗಳ ಸ್ವಂತ ಬ್ರಾಂಡಿAಗ್ ಮಾಡುವ ಮೂಲಕ ಇದನ್ನು ಆದಾಯ ಮೂಲವಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಎನ್ನುವುದು ಕೂಡ ಮುಖ್ಯವಾಗುತ್ತದೆ. ಬೆಳೆಯಲ್ಲಿ ವೈವಿಧ್ಯತೆ ಇದ್ದರೆ ಭೂಮಿಯಲ್ಲಿ ಸುಸ್ಥಿರತೆ ಕಾಪಾಡಬಹುದು ಎಂದು ಹೇಳಿದರು.
ಜಿಲ್ಲಾ ಆಯುಶ್ ಅಧಿಕಾರಿ ಡಾ. ಜಿ. ಶೈಲಜಾ ಮಾತನಾಡಿ, ಆಯುರ್ವೇದ ಪದ್ಧತಿ ಎಂದರೆ ಔಷದಿಗಳ ಸರಿಯಾದ ಬಳಕೆಯ ಕ್ರಮ. ನಮ್ಮಲ್ಲಿ ಸ್ಥಳೀಯವಾಗಿ ಸಾಕಷ್ಟು ಸಂಖ್ಯೆಯಲ್ಲಿ ಔಷದೀಯ ಸಸ್ಯಗಳಿವೆ. ಇವುಗಳ ಬಗ್ಗೆ ತಿಳಿದುಕೊಂಡು ಸರಿಯಾದ ಬಳಕೆ ಆಗಬೇಕಿದೆ ಎಂದರು.
ಪ್ರಗತಿಪರ ರೈತ ನಾಪಂಡ ಪೂಣಚ್ಚ ಮಾತನಾಡಿ, ಪ್ರಗತಿಯೇ ಎಲ್ಲ ರೈತರ ಉದ್ದೇಶ. ಹಾಗಾಗಿ ಎಲ್ಲರೂ ಪ್ರಗತಿಪರ ರೈತರೇ ಆಗಿರುತ್ತಾರೆ. ರೈತರು ಪರಿಸರ ಪರ ಆಗಬೇಕು. ರೈತರು ಪರಿಸರಕ್ಕೆ ವಿರೋಧವಾಗಿ ಹೋದಾಗ ಪ್ರಕೃತಿಯೇ ಪಾಠ ಕಲಿಸುತ್ತದೆ. ಹಾಗಾಗಿ ಪ್ರಕೃತಿಗೆ ಪೂರಕವಾಗಿ ಕೃಷಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಪ್ರೇಮ ಐಮುಡಿಯಂಡ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತಜ್ಞರ ಜತೆ ಏರ್ಪಡಿಸಿದ್ದ ಸಂವಾದದಲ್ಲಿ ರೈತರು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.