

ಬಂಟ್ವಾಳ: ದೇವಸ್ಥಾನಗಳ ಸುಪರ್ದಿಗೆ ಒಳಪಟ್ಟ ಜಮೀನುಗಳಲ್ಲಿ ಔಷಧೀಯ ಗಿಡ, ಹಣ್ಣಿನ ಗಿಡ ಮತ್ತಿತರ ಗಿಡಗಳನ್ನು ನೆಟ್ಟು ದೇವಸ್ಥಾನದ ಪರಿಸರವನ್ನು ಆಕರ್ಷಣಿಯಗೊಳಿಸಬೇಕು. ದೇವಸ್ಥಾನಗಳು ಸಮಾಜಮುಖಿ ಕಾರ್ಯಗಳ ಕೇಂದ್ರಗಳಾಗಬೇಕು. ಆಯ್ದ ದೇವಸ್ಥಾನಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಬೇಕು ಎಂದು ಧಾರ್ಮಿಕದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ 36 ಎ ಗ್ರೇಡ್ ದೇವಸ್ಥಾನಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಧಾರ್ಮಿಕ ದತ್ತಿ ಪರಿಷತ್ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ , ಶಾಸಕ ರಾಜೇಶ್ ನಾಕ್, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಧಾರ್ಮಿಕ ಪರಿಷತ್ ಸದಸ್ಯರಾದ ಕಶೇಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್, ಪೊಳಲಿ ಕ್ಷೇತ್ರದ ಆನುವಂಶಿಕ ಮೋಕ್ತೇಸರರಾದ ಉಳಿಪ್ಪಾಡಿಗುತ್ತು ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಆಡಳಿತ ಮೋಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಪವಿತ್ರಪಾಣಿ ಮಾಧವ ಭಟ್ ಉಪಸ್ಥಿತರಿದ್ದರು.