

ಸೋಮವಾರಪೇಟೆ: ಔಷಧೀಯ ಗುಣಗಳುಳ್ಳ ಸಸಿಗಳನ್ನು ಹೆಚ್ಚಾಗಿ ನೆಟ್ಟರೆ ನಮ್ಮ ಆರೋಗ್ಯದೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬಹುದು ಎಂದು ಇಲ್ಲಿನ ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆಯ ಆರ್ಯುವೇದ ವೈದ್ಯರು ಹಾಗೂ ಯೋಗ ತರಬೇತುದಾರ ಡಾ.ಶ್ವೇತಾ ಅಭಿಪ್ರಾಯಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಪಟ್ಟಣದ ಸವಿತಾ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಔಷಧೀಯ ಗಿಡಗಳ ಮೂಲಕ ಮನೆ ಮದ್ದು ಮಾಡಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಯಮಿತ ವ್ಯಾಯಾಮ ಮತ್ತು ಯೋಗ ಕೂಡ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಜನ ಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಗಿಡ ನೆಟ್ಟರೆ ಸಾಲದು ಅದನ್ನು ಉಳಿಸಿ-ಬೆಳೆಸಿ ಪೋಷಿಸಬೇಕಾದದು ನಮ್ಮ ಜವಾಬ್ದಾರಿಯಾಗಿರಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್ ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ಮಾತ್ರ ಪ್ರತಿಯೊಂದು ಜೀವ ಸಂಕುಲದ ಉಳಿವು ಸಾಧ್ಯ ಎಂದರು.
ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಸಿ.ಕೆ.ಭವ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸವಿತಾ ಸಮಾಜದ ಕಾರ್ಯದರ್ಶಿ ಬಾಲಕೃಷ್ಣ, ಒಕ್ಕೂಟದ ಅಧ್ಯಕ್ಷರಾದ ಲತಾ ಮತ್ತು ಅಣ್ಣಪ್ಪ, ಶೌರ್ಯ ವಿಪತ್ತು ತಂಡದ ಸದಸ್ಯರು, ಸ್ವಸಹಾಯ ಪ್ರಗತಿಬಂಧು ಸಂಘದ ಸದಸ್ಯರು ಇದ್ದರು.
ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಹೋಮಿಯೋಪಥಿ ಆಸ್ಪತ್ರೆ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಸ್ವಸಹಾಯ ಸಂಘದ ಸದಸ್ಯರಿಗೆ 150 ಗಿಡಗಳನ್ನು ವಿತರಿಸಲಾಯಿತು.