ಔಷಧೀಯ ಸಸ್ಯಗಳಿಗೆ ಹೆಚ್ಚಿದ ಬೇಡಿಕೆ, ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಡಾ. ಶ್ರೀನಿವಾಸಲು ಹೇಳಿಕೆ

IMG-20240608-WA0011.jpg
Published on

ಹುಬ್ಬಳ್ಳಿ: ಭಾರತ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಔಷಧೀಯ ಸಸ್ಯಗಳಿಗೆ ಬಹಳಷ್ಟು ಬೇಡಿಕೆ ಇದೆ. ಹಲವು ಕಂಪನಿಗಳು ಇವುಗಳನ್ನು ಬಳಸಿಕೊಂಡು ಔಷಧ ತಯಾರಿಸಲು ಮುಂದೆ ಬಂದಿವೆ. ಇಂತಹ ಅವಕಾಶಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಬೆಂಗಳೂರಿನ ಆಯುಷ್ ಇಲಾಖೆಯ ಆಯುಕ್ತ ಡಾ. ಶ್ರೀನಿವಾಸುಲು ಹೇಳಿದರು.

ನಗರದ ಬಿವಿಬಿ ಆವರಣದ ಬಯೋಟೆಕ್ ಸಭಾಂಗಣದಲ್ಲಿ ಶನಿವಾರ ಗದಗ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ, ಬೆಂಗಳೂರಿನ ಆಯುಷ್ ಇಲಾಖೆ, ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ದಾಕ್ಷಾಯಿಣಿ ಬಿ. ಜಾಬಶೆಟ್ಟಿ ಫೌಂಡೇಷನ್ ವತಿಯಿಂದ ಹಾಗೂ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ ಮತ್ತು ಕೃಷಿ ಹಾಗೂ ಆರೋಗ್ಯ ರಕ್ಷಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲೆಯ ಕಪ್ಪತಗುಡ್ಡವು ಔಷಧೀಯ ಸಸ್ಯಗಳ ಕೇಂದ್ರ ಬಿಂದುವಾಗಿದೆ. ಇಲ್ಲಿ 400ಕ್ಕೂ ಹೆಚ್ಚು ಔಷಧಿ ಸಸ್ಯಗಳಿವೆ. ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಔಷಧಿ ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಪರ್ಯಾಯ ಬೆಳೆ ಬಗ್ಗೆ ರೈತರು ಆಲೋಚನೆ ಮಾಡಬೇಕು. ಔಷಧ ಕಂಪನಿಗಳು ನೇರವಾಗಿ ರೈತರೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದು, ಇದರಿಂದ ರೈತರಿಗೆ ಇನ್ನಷ್ಟು ವಿಶ್ವಾಸ ಬರಲಿದೆ ಎಂದರು.

ಔಷಧಿ ಸಸ್ಯಗಳ ಉದ್ಯಮದಲ್ಲಿ ಪ್ರತಿ ವರ್ಷ ಸುಮಾರು 25 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಈ ಭಾಗದ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಈ ಬಗ್ಗೆ ಯೋಚಿಸಬೇಕು. ಇಲಾಖೆ ಎಲ್ಲ ಮಾಹಿತಿ ನೀಡಲು ಸಿದ್ಧವಿದೆ ಎಂದರು.

ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೆಂಕಟೇಶನ್ ಮಾತನಾಡಿ, ಔಷಧೀ ಸಸ್ಯ ಬೆಳೆಯುವವರು ಹಾಗೂ ಉದ್ಯಮಿಗಳ ಮಧ್ಯೆ ಅಂತರ ದೊಡ್ಡದಾಗಿದೆ. ಇದನ್ನು ಕಡಿಮೆ ಮಾಡಲು ಕಾರ್ಯಾಗಾರ ಪ್ರಯತ್ನಿಸಲಿದೆ. ಅನೇಕ ಕಂಪನಿಗಳಿಗೆ ಔಷಧಿ ಸಸ್ಯಗಳು ಸಿಗುತ್ತಿಲ್ಲ. ಅಲೋಪತಿ ಔಷಧಿಯಿಂದ ಗುಣವಾಗದೇ ಎಷ್ಟೋ ಜನರು ವಾಪಸ್ ಆಯುರ್ವೇದ ಪದ್ಧತಿಗೆ ಬಂದಿದ್ದಾರೆ ಎಂದು ತಮ್ಮ ಕುಟುಂಬದ ಉದಾಹರಣೆ ನೀಡಿ ವಿವರಿಸಿದರು.

ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಜಗನ್ನಾಥರಾವ್ ಮಾತನಾಡಿ, "ಔಷಧಿಗೆ ಬಾರದ ಸಸ್ಯವೇ ಈ ಭೂಮಿ ಮೇಲಿಲ್ಲ' ಎಂದು ಹೇಳಲಾಗುತ್ತದೆ. ಹಾಗೇ ಭಾರತೀಯ ಪರಂಪರೆಯಲ್ಲಿ ಔಷಧಿ ಸಸ್ಯಗಳು ಬಳಕೆಯಾಗುತ್ತ ಬಂದಿವೆ. ಇದೇ ಕಾರಣಕ್ಕೆ ಕರೊನಾ ಸಾಂಕ್ರಾಮಿಕವನ್ನು ಭಾರತೀಯರು ಮನೆಮದ್ದುಗಳ ಮೂಲಕವೇ ಸಮರ್ಥವಾಗಿ ಎದುರಿಸಿದರು. ವಿಷಾದದ ಸಂಗತಿ ಎಂದರೆ ಇಂತಹ ಬಹುಉಪಕಾರಿಯಾದ ಆಯುರ್ವೇದದಿಂದ ಜನರು ದೂರ ಸರಿಯುತ್ತಿರುವುದು. ಇದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಸಂಜೀವಿನಿ ಆಯುರ್ವೇದ ಕಾಲೇಜಿನ ಸಿಇಒ ಡಾ. ಎಸ್.ಕೆ. ಬನ್ನಿಗೋಳ, ವಿಶ್ವದ ಜನರು ಈಗ ಔಷಧಿ ಸಸ್ಯ, ಆಹಾರ ಪದ್ಧತಿ ಹಾಗೂ ಜೀವನಶೈಲಿ ಈ ಮೂರರತ್ತ ಗಮನ ಹರಿಸುತ್ತಿದ್ದಾರೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಔಷಧಿ ಸಸ್ಯಗಳು ಸಿಗುತ್ತಿಲ್ಲ. ಇವುಗಳನ್ನು ಬೆಳೆಯುವವರಿಗೆ ಉತ್ತಮ ಭವಿಷ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್, ಔಷಧೀಯ ಸಸ್ಯಗಳನ್ನು ಬಳಸಿಕೊಂಡು ರೋಗ ಗುಣಪಡಿಸುವ ಭಾರತೀಯರ ಪಾರಂಪರಿಕ ಜ್ಞಾನದ ಮರುಹುಟ್ಟು ಕಳೆದ ಒಂದು ದಶಕದಿಂದ ಆಗುತ್ತಿದೆ. ಆಯುರ್ವೇದ ಎಂಬುದು ಭಾರತೀಯರ ಹೃದಯಕ್ಕೆ ಹತ್ತಿರವಾದ ವಿಷಯ. ಇದನ್ನು ಬೆಳೆಸಲು ಕೆಎಲ್ಇ ಕೂಡ ಕೈಜೋಡಿಸಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಪ್ಪತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಮನುಷ್ಯ ನಿಸರ್ಗದಿಂದ ದೂರ ಹೋದರೆ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಹಸಿರು ಸಂಪತ್ತೇ ನಮಗೆ ನಿಜವಾದ ಬಂಗಾರ. ಹಾಗಾಗಿ ಕಪ್ಪತಗುಡ್ಡ ಸಂರಕ್ಷಣೆಗೆ ಗದಗ ಭಾಗದ ಜನರು ಜಾಗೃತರಾಗಿ ನಿಂತಿದ್ದಾರೆ. ರೈತರು ಔಷಧೀ ಸಸ್ಯ ಬೆಳೆಯಬೇಕು, ಗೋ, ನಂದಿ ಆಧಾರಿತ ಕೃಷಿ ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಚಿಕಿತ್ಸಾ ಕೇಂದ್ರದ ವೈದ್ಯಶ್ರೀ ವೇದಶ್ರವ ಶರ್ಮಾ ಅವರನ್ನು ಗೌರವಿಸಲಾಯಿತು.
ಔಷಧಿ ಸಸ್ಯಗಳ ಪ್ರದರ್ಶನ, ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿ.ಎಸ್. ಪಾಟೀಲ, ಡಾ. ಎಂ.ಆರ್. ಪಾಟೀಲ, ಡಾ. ಎಂ.ವಿ. ಚಿತ್ತವಾಡಗಿ, ಡಾ. ಬಿ.ಎಸ್. ಮಾಳವಾಡ, ಭಾಲಚಂದ್ರ ಜಾಬಶೆಟ್ಟರ, ಇತರರು ಉಪಸ್ಥಿತರಿದ್ದರು.

ಪ್ರೊ. ರವೀಂದ್ರ ಕರಡಿ, ಡಾ. ಸಿ.ಎಸ್. ಅರಸನಾಳ ಪರಿಚಯಿಸಿದರು. ಡಾ. ಆರ್.ಎಫ್. ಇಂಚಲ ಪ್ರಾಸ್ತಾವಿಕ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಾ. ಸಿ.ಸಿ. ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net