

ಮಂಡ್ಯ: ಸಂಘಟನೆಗಳು ಸಾಮಾಜಿಕ ಸಾಮರಸ್ಯ ಕಾಪಾಡುವ ಕಾಯಕವನ್ನು ಮಾಡಬೇಕು ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಆ್ಯಂಡ್ ಆಕ್ವಿವಿಸ್ಟ್(ನಿಫಾ) ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲ ಎಂ.ಯೋಗೀಶ್ ಸಲಹೆ ನೀಡಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ನಿಫಾ ಸಂಸ್ಥಾನದ ದಿನದ ಸಾರ್ವಜನಿಕರಿಗೆ ಔಷಧ ಸಸ್ಯ, ಪೌಷ್ಟಿಕ ಆಹಾರ ವಿತರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಭಾವೈಕ್ಯತೆ ಮೂಡಿಸುವ ಕಾಯಕದಲ್ಲಿ ತಲ್ಲೀನರಾಗಿರುವ ನಿಫಾ ಸಂಘಟನೆಯು ಧಮನಿತ ಜನರು, ಕಲಾವಿದರು, ಸಮಾನ ಮನಸ್ಕರೆಲ್ಲರೂ ಸೇರಿ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಾ ಬಂದಿದೆ. ದೇಶದ 250 ಜಿಲ್ಲೆಗಳಲ್ಲಿ ನಿಫಾ ಸಂಘಟನೆಯು ಕಾರ್ಯನಿರ್ವಹಿಸುತ್ತಿದೆ ಎಂದರು.
ಭಾರತ ಹಸಿವು ಮುಕ್ತ ರಾಷ್ಟ್ರವನ್ನಾಗಿಸಲು ಹಲವು ಉಪಯುಕ್ತ ಕಾರ್ಯಗಳನ್ನು ಹಮ್ಮಿಕೊಂಡು ನೆರವೇರಿಸಲಾಗುತ್ತಾ ಬಂದಿದೆ. ನಿಫಾ ಸಂಘಟನೆಯು ಜನರಲ್ಲಿ ಸಾಮರಸ್ಯ ಮೂಡಿಸುವ ಜತೆಗೆ ಸಮಷ್ಠಿ ಪ್ರಜ್ಞೆಯನ್ನು ಬೆಳೆಸುತ್ತದೆ. ಜಾತ್ಯಾತೀತ ಸಮಾಜವಾದಿ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಸಕ್ತ 25ನೇ ವರ್ಷದ ಸಮಾರಂಭದಲ್ಲಿದ್ದು, ಯುವಜನರನ್ನು ಪ್ರೇರೇಪಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಮಾತನಾಡಿ, ನೊಂದ ಜನರ ಕಣ್ಣೋರೆಸುವ ಕಾಯಕಕ್ಕೆ ಸಂಘಟನೆಗಳು ಮುಂದಾಗಬೇಕಿದೆ ಎಂದರು.
ಲೇಖಕಿ ಎಚ್.ಎಸ್.ರೋಹಿಣಿ, ನಿಫಾ ಸಂಘಟನೆ ಸಂಚಾಲಕರಾದ ಅರವಿಂದ ಪ್ರಭು, ಎಂ.ಎನ್.ಶಿವಕುಮಾರ್ ಆರಾಧ್ಯ, ಧನುಷ್‌ಗೌಡ, ಚೇತನ್‌ಕುಮಾರ್, ಸಂತೆಕಸಲಗೆರೆ ಬಸವರಾಜ್, ಅವಿನಾಶ್, ರವಿ ಇತರರಿದ್ದರು. ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಔಷಧ ಗಿಡವನ್ನು ವಿತರಿಸಲಾಯಿತು. 10 ಜನರು ರಕ್ತದಾನ ಮಾಡಿದರು.