

ಕೊಳ್ಳೇಗಾಲ: ಸ್ನೇಹಿತರೊಟ್ಟಿಗೆ ತಾಲೂಕಿನ ಶಿವನಸಮುದ್ರದ ಭರಚುಕ್ಕಿಗೆ ತೆರಳಿದ್ದ ವೈದ್ಯ ವಿದ್ಯಾರ್ಥಿ ಕಾವೇರಿ ನದಿಗೆ ಇಳಿದು ಮೃತಪಟ್ಟಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮಗನನ್ನು ಆತನ ಸಹಪಾಠಿಗಳು ನೀರಿಗೆ ಬಲವಂತವಾಗಿ ಇಳಿಸಿ ಕೊಲೆ ಮಾಡಿದ್ದಾರೆ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ವಿದ್ಯಾರ್ಥಿ ತಂದೆ ಬುಧವಾರ ದೂರು ನೀಡಿದ್ದಾರೆ.
ರಾಮನಗರದ ಹಾರೋಹಳ್ಳಿ ನಿವಾಸಿ ಹಾಗೂ ಹಾರೋಹಳ್ಳಿಯ ಚಂದ್ರಮ್ಮ ದಯಾನಂದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಂದನ್ ಗೌಡ (19) ಮೃತ ವೈದ್ಯ ವಿದ್ಯಾರ್ಥಿ.
ನಂದನ್‌ಗೌಡ ಜತೆ ಮಂಗಳವಾರ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಶಿವಮೊಗ್ಗ ಶಾಂತಿನಗರದ ನಿವಾಸಿ ತನಯ್, ಬೆಂಗಳೂರು ಅಮೃತಹಳ್ಳಿಯ ತುಷಾರ್, ಶಿವಮೊಗ್ಗದ ಪವನ್, ಬೆಂಗಳೂರು ವಿಜಯನಗರದ ಪ್ರಫುಲ್, ರಜತ್, ಚತುರ್ ಶಿವನಸಮುದ್ರದ ಭರಚುಕ್ಕಿಗೆ ಆಗಮಿಸಿದ್ದರು.
ಈ ವೇಳೆ ನಂದನ್‌ಗೌಡ ಕಾವೇರಿ ನದಿಗೆ ಇಳಿದು ಕಾಣೆಯಾಗಿದ್ದನು. ಬಳಿಕ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧಕಾರ್ಯ ನಡೆಸಿದರು. ಬುಧವಾರ ಕಾವೇರಿ ನೀರಿನಲ್ಲಿ ನಂದನ್‌ಗೌಡನ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಹಪಾಠಿಗಳಾದ 6 ಜನರು ಉದ್ದೇಶಪೂರ್ವಕವಾಗಿ ನನ್ನ ಮಗನನ್ನು ಬಲವಂತವಾಗಿ ಭರಚುಕ್ಕಿಗೆ ಕರೆದುಕೊಂಡು ಬಂದು ರ‌್ಯಾಗಿಂಗ್ ಮಾಡಿ ಅವನ ಬಟ್ಟೆ ಬಿಚ್ಚಿಸಿ ನೀರಿಗೆ ಇಳಿಸಿ ಕೊಲೆ ಮಾಡಿದ್ದಾರೆ. ಹಾಗಾಗಿ 6 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.