ವೈದ್ಯಕೀಯ ವಿದ್ಯಾರ್ಥಿನಿ ಕೊಲೆ; ಮೈಸೂರಿನಲ್ಲಿ ವೈದ್ಯರ ಪ್ರತಿಭಟನೆ

mysore
Published on

ಮೈಸೂರು: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣವನ್ನು ಖಂಡಿಸಿ ನಗರದಲ್ಲಿ ವೈದ್ಯರು ಶನಿವಾರ ಮುಷ್ಕರ ನಡೆಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.


ನಗರದ ದೊಡ್ಡಕೆರೆ ಮೈದಾನದ ಎದುರು ಜಮಾಯಿಸಿದ ವೈದ್ಯರು, ಸಾವಿರಾರು ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಿತ್ತಿ ಫಲಕಗಳನ್ನು ಹಿಡಿದು ದಾರಿಯುದ್ದಕ್ಕೂ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ರ‌್ಯಾಲಿಯು ಹಾಡಿರ್ಂಜ್ ವೃತ್ತ, ಇಟ್ಟಿಗೆಗೂಡು ಮಾರ್ಗ, ಪೊಲೀಸ್ ಆಯುಕ್ತರ ಕಚೇರಿ ರಸ್ತೆ, ನಜರ್‌ಬಾದ್ ವೃತ್ತ, ಮಹದೇಶ್ವರ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಡಿಸಿಗೆ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು.


ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಅಮಾನುಷ ಹತ್ಯೆ ಪ್ರಕರಣ ನಡೆದ ಮೇಲೆ ದೇಶಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ವೈದ್ಯರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು


ಅತ್ಯಾಚಾರಿಗಳನ್ನು ತಕ್ಷಣವೇ ಬಂಧಿಸಿ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಪ್ರಕರಣ ನಡೆದು 5 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದೆ ಇರುವುದು ಸರಿಯಲ್ಲ. ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಕೈಗೊಂಡಿರುವ ಸಿಬಿಐ ತಕ್ಷಣವೇ ದೋಷಾರೋಪಣಾ ಪಟ್ಟಿ ಸಲ್ಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಮೃತಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.


ವೈದ್ಯರು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಾದರೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ಭದ್ರತೆ ಕಲ್ಪಿಸಬೇಕು. ಪ್ರತಿಯೊಂದು ಕಟ್ಟಡಗಳಲ್ಲೂ ವಿಶ್ರಾಂತಿ ಕೊಠಡಿ ಸೇರಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.


ಸಂಘದ ಮೈಸೂರು ಶಾಖೆ ಅಧ್ಯಕ್ಷ ಡಾ.ಜಯಂತ್, ಮಾಜಿ ಅಧ್ಯಕ್ಷ ಡಾ.ಸುಜಾತ ರಾವ್, ಡಾ.ಸಂತೃಪ್ತ್ ಸೇರಿದಂತೆ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ, ಸೆಂಟ್ ಜೋಸೆಫ್ ಆಸ್ಪತ್ರೆ, ಗೋಪಾಲಗೌಡ ಆಸ್ಪತ್ರೆ, ಮಿಷನ್ ಆಸ್ಪತ್ರೆ, ಕಾವೇರಿ ಆಸ್ಪತ್ರೆಯ ವೈದ್ಯರು, ವಿದ್ಯಾರ್ಥಿಗಳು, ನಸಿರ್ಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net