ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವು

Bike Accident_2
Published on

ಶ್ರೀರಂಗಪಟ್ಟಣ: ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮ ಮುಂಭಾಗದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮಂಡ್ಯದ ಮಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಮೊದಲನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಮೋಹಿತ್ ಮಾಧವರಾವ್(27) ಮೃತ ವಿದ್ಯಾರ್ಥಿ.

ಈತನ ತಂದೆ ಮಾಧವರಾವ್ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಕುಟುಂಬ ಸಮೇತ ಗುಜರಾತ್ ರಾಜ್ಯದ ಬರೋಡಾದಲ್ಲಿ ನೆಲೆಸಿದ್ದಾರೆ. ಇವರ ಏಕೈಕ ಪುತ್ರ ಮೋಹಿತ್ ಮಾಧವರಾವ್ ಭಾನುವಾರ ತನ್ನಿಬ್ಬರು ಸ್ನೇಹಿತರೊಂದಿಗೆ 2 ಬೈಕ್‌ಗಳಲ್ಲಿ ಮೈಸೂರಿನಲ್ಲಿ ಸಿನಿಮಾ ವೀಕ್ಷಿಸಲು ತೆರಳಿದ್ದು, ರಾತ್ರಿ 2.30ರ ವೇಳೆ ಮಂಡ್ಯಕ್ಕೆ ಬರುವಾಗ ರಸ್ತೆ ಉಬ್ಬಿನ ಬಳಿ ನಿಯಂತ್ರಣ ಸಿಗದೆ ಸುಮಾರು 50 ಮೀಟರ್ ದೂರಕ್ಕೆ ಹಾರಿ ಹೆದ್ದಾರಿ ಬದಿಯ ಗೋಡೆಗೆ ಡಿಕ್ಕಿಯಾಗಿದ್ದು, ಬಳಿಕ ರಸ್ತೆ ಮಧ್ಯೆ ಹಾಕಿರುವ ತಂತಿ ಬೇಲಿಗೆ ಚುಚ್ಚಿಕೊಂಡು ಬೆನ್ನು ಹಾಗೂ ದೇಹದ ವಿವಿಧ ಭಾಗಕ್ಕೆ ಗಂಭೀರ ಗಾಯಗೊಂಡು ಕೆಳಗೆ ಬಿದ್ದಿದ್ದ.

ನಂತರ ಮತ್ತೊಂದು ಬೈಕ್‌ನಲ್ಲಿದ್ದ ಸ್ನೇಹಿತರು ಹಾಗೂ ಇತರ ವಾಹನ ಸವಾರರ ನೆರವಿನಿಂದ ಗಾಯಾಳುವನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಆತ ಸೋಮವಾರ ಮುಂಜಾನೆ ಮೃತಪಟ್ಟಿದ್ದಾನೆ.

ಶವವನ್ನು ಮಿಮ್ಸ್‌ನ ಶವಾಗಾರಕ್ಕೆ ರವಾನಿಸಲಾಗಿದೆ. ಮೃತನ ಸ್ನೇಹಿತ ಮೈಸೂರಿನ ಪೃತ್ವಿಕ್ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net