ಪ್ರಾಣಕ್ಕೆ ಎರವಾಯ್ತು ಮಧ್ಯರಾತ್ರಿ ಜಾಲಿರೈಡ್- ಎಂಬಿಬಿಎಸ್ ವಿದ್ಯಾರ್ಥಿ ಸಾವು

bike
Published on

ಉಳ್ಳಾಲ: ಅಂಬ್ಲಮೊಗರುವಿನಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಬೈಕ್ ಸವಾರ, ಸ್ಥಳೀಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೋರ್ವ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರು ರಾಮಯ್ಯ ರೋಡ್ ನಿವಾಸಿ ಸಿದ್ಧರಾಜು ಎಂಬುವರ ಪುತ್ರ ನಿಶಾಂತ್ ಎ.ಎಸ್.(23) ಮೃತ. ಈತನ ಜತೆಗಿದ್ದ ಸ್ನೇಹಿತ ಶಾಕಿಬ್(23) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಶಾಂತ್ ಮತ್ತು ಶಾಕಿಬ್ ಇಬ್ಬರೂ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಕುತ್ತಾರ್‌ನಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಿದ್ದ ಇವರು, ಸೋಮವಾರ ರಾತ್ರಿ 12 ಗಂಟೆ ಹೊತ್ತಿಗೆ ಬೈಕ್ ರೈಡ್‌ಗೆ ತೆರಳಿದ್ದರು ಎನ್ನಲಾಗಿದೆ. ಅಂಬ್ಲಮೊಗರುವಿನತ್ತ ಬೈಕ್‌ನಲ್ಲಿ ತೆರಳುತ್ತಿದ್ದ ಇವರು ಮಜಲ್‌ಬೈಲ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದಾರೆ. ಇವರು ಸಂಚರಿಸುತ್ತಿದ್ದ ಬೈಕ್ ರಸ್ತೆ ಬದಿ ಬಿದ್ದಿದ್ದರೆ, ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ರಸ್ತೆಯಲ್ಲಿರುವ ಹಂಪ್ಸ್ ಬಗ್ಗೆ ಅರಿವಿಲ್ಲದ ಹಿನ್ನೆಲೆಯಲ್ಲಿ ಬೈಕ್ ಹಂಪ್ಸ್‌ನಲ್ಲಿ ಹಾರಿದ್ದು ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆನ್ನಲಾಗಿದೆ.

ಘಟನೆ ನಡೆದ ಪ್ರದೇಶ ಗ್ರಾಮೀಣ ಭಾಗವಾಗಿದ್ದು, ಇಲ್ಲಿ ಹಗಲಿನಲ್ಲೂ ನಿರ್ದಿಷ್ಟ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದರೆ, ರಾತ್ರಿ ವೇಳೆ ವಾಹನ ಸಂಚಾರ ತೀರಾ ವಿರಳವಾಗಿರುತ್ತದೆ. ಇದರಿಂದಾಗಿ ಅಪಘಾತ ನಡೆದ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬರಲು ಕೆಲವು ಸಮಯ ಕಳೆದಿದೆ. ರಸ್ತೆಬದಿ ಬಿದ್ದಿದ್ದ ಬೈಕ್, ಪಕ್ಕದಲ್ಲೇ ಪೊದೆಯ ಬಳಿ ಇಬ್ಬರು ಯುವಕರು ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದರೂ ಅದಾಗಲೇ ನಿಶಾಂತ್ ಮೃತಪಟ್ಟಿದ್ದ.

ಮೃತ ನಿಶಾಂತ್ ಹೈಕೋರ್ಟ್ ನ್ಯಾಯಾಧೀಶ ರಂಗಸ್ವಾಮಿ ನಟರಾಜ್ ಅವರ ಸೋದರಳಿಯನಾಗಿದ್ದು, ಅಪಘಾತದ ಸುದ್ದಿ ತಿಳಿಯುತ್ತಲೇ ಅವರು ದೇರಳಕಟ್ಟೆಗೆ ಆಗಮಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net