ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ

Hospital Visit MLA Basavaraj Shivannanavar
Published on

ಬ್ಯಾಡಗಿ: ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು. ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿ ರೋಗಿಗಳಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ ನೀಡಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ವೈದ್ಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ವೈದ್ಯಸಿಬ್ಬಂದಿಯನ್ನು ಆಸ್ಪತ್ರೆಗಳಲ್ಲಿ ಸೇವೆಗೆಂದು ನೇಮಿಸಿದ್ದು, ನೌಕರರು ತಮಗೆ ಸಿಕ್ಕಿರುವ ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಆಸ್ಪತ್ರೆಗೆ ಬರುವವರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು. ಮಹಿಳಾ ಸಿಬ್ಬಂದಿ ಕುರಿತು ಸಾರ್ವಜನಿಕರು ದೂರು ನೀಡಿದ್ದಾರೆ. ಮಾನವೀಯತೆಯಿಂದ ವರ್ತಿಸುವ ಮೂಲಕ ಸಮರ್ಪಕ ಸೇವೆ ಒದಗಿಸಬೇಕು ಎಂದರು.

ಗ್ರಾಮೀಣ ಪ್ರದೇಶದಿಂದ ರಾತ್ರಿ ವೇಳೆ, ಹಾವು ಕಡಿತ, ವಿಷ ಸೇವನೆ, ವಿದ್ಯುತ್ ಸ್ಪರ್ಶ, ಅಪಘಾತ, ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದು, ಹೃದಯ ತೊಂದರೆಗಳಿಂದ ತುರ್ತಾಗಿ ಆಗಮಿಸುತ್ತಾರೆ. ಅಂಥವರಿಗೆ ತಕ್ಷಣ ವೈದ್ಯಕೀಯ ಸೇವೆ ನೀಡಿ, ಅವಶ್ಯವಿದ್ದಲ್ಲಿ ಮಾತ್ರ ಜಿಲ್ಲಾಸ್ಪತ್ರೆಗೆ ದಾಖಲಿಸಲು ಸೂಚಿಸಬೇಕು. ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ನೀಡುವಂಥ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ನೀಡಿದರೆ, ಬರುವ ರೋಗಿಗಳು ನಿಮ್ಮನ್ನು ದೇವರೆಂದು ಕಾಣಲಿದ್ದಾರೆ ಎಂದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪುಟ್ಟರಾಜ ಮಾತನಾಡಿ, ಪ್ರತಿದಿನ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ 400ರಿಂದ 500ಕ್ಕೆ ಏರಿದ್ದು, ಗುಣಮಟ್ಟದ ಸೇವೆ ನೀಡಲಾಗುತ್ತಿದೆ. ರೋಗಿಗಳಿಗೆ ನೀರಿನ ಅಗತ್ಯವಿದ್ದು, ಆಸ್ಪತ್ರೆಯ ಬಳಿ ದೊಡ್ಡ ನೀರಿನ ಜಲಾಗಾರ ನಿರ್ವಿುಸಿಕೊಡಬೇಕು. ಆಸ್ಪತ್ರೆ ಮರುನಿರ್ವಣ, ವಸತಿ ಗೃಹಗಳು ದುಸ್ಥಿತಿಯಲ್ಲಿವೆ. ಆಸ್ಪತ್ರೆಯ ಹೊರಭಾಗದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ರಾತ್ರಿ ಪಾಳಯಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. 24/7 ಕಾರ್ಯನಿರ್ವಹಿಸುವ ಆಸ್ಪತ್ರೆಗೆ ಸೋಲಾರ ವ್ಯವಸ್ಥೆ ಮಾಡಿಕೊಡಬೇಕು. ಯುಜಿಡಿ ತೊಂದರೆ ತಪ್ಪಿಸಿ, ಬೀದಿದೀಪಗಳನ್ನು ಸಮರ್ಪಕವಾಗಿ ಒದಗಿಸಬೇಕು. ಆಸ್ಪತ್ರೆಯ ಆವರಣ ರಸ್ತೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಎ.ಎಂ. ಕಾಗದಗಾರ, ಪುರಸಭೆ ಮುಖ್ಯಾಧಿಕಾರಿ ಹೊಳೆಪ್ಪಗೋಳ, ಡಾ. ವೀರೇಶ ಹೊಸಮನಿ, ಡಾ.ರಾಘವೇಂದ್ರ, ಡಾ. ಶ್ರೀನಿವಾಸ, ಎಂ. ನಾಗರಾಜ, ಮುಖಂಡರಾದ ದಾನಪ್ಪ ಚೂರಿ, ದುರ್ಗೆಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಅರುಣಕುಮಾರ ಪಾಟೀಲ, ಸುಲೋಚನಾ ಹುಣಸಿಮರದ, ನಜೀರಅಹ್ಮದ್​ಶೇಖ್, ರೇಖಾ ಸಣ್ಣನೀಲಪ್ಪನವರ, ರವಿ ಹುಣಸೀಮರದ ಇತರರಿದ್ದರು.

ವಾಸ್ತವ ಸ್ಥಿತಿ ಅರಿತ ಶಿವಣ್ಣನವರ

ಸಭೆಗೂ ಮುನ್ನ ಆಸ್ಪತ್ರೆಯ ಆಡಳಿತಾಧಿಕಾರಿಗಳ ಜತೆ ಕ್ಷಕಿರಣ, ಔಷಧ ವಿತರಣೆ ವ್ಯವಸ್ಥೆ, ವಿವಿಧ ಚಿಕಿತ್ಸಾ ಕೊಠಡಿಗಳು, ಐಸಿ ಕೊಠಡಿ ಸೇರಿದಂತೆ ಸಂಪೂರ್ಣ ಆಸ್ಪತ್ರೆಯ ಎರಡು ಮಹಡಿಗಳನ್ನು ವೀಕ್ಷಿಸಿ, ವಿಭಾಗೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ಪರಿಶೀಲಿಸಿ, ಚಿಕಿತ್ಸೆಗೆ ದಾಖಲಾದ ರೋಗಿಗಳ ಜತೆ ಸೇವೆ ಕುರಿತು ವಾಸ್ತವ ಸ್ಥಿತಿ ತಿಳಿದುಕೊಂಡರು ತುರ್ತು ಸಮಸ್ಯೆಗೆ ಅಗತ್ಯಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net