

ಹಾಸನ: ಕರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ವಾಸ್ತವ್ಯಕ್ಕೆ 70 ಹಾಸಿಗೆಯ ಪ್ರತ್ಯೇಕ ಹೋಟೆಲ್ ವ್ಯವಸ್ಥೆ ಮಾಡಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ಸಾಕಷ್ಟು ಮುತುವರ್ಜಿ ವಹಿಸಿದ ಪರಿಣಾಮ ಕರೊನಾ ಸೋಂಕಿತರ ಪ್ರಮಾಣ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಮುಂಬೈನಿಂದ ಬಂದಿರುವ ಒಂಬತ್ತು ಸೋಂಕಿತರನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದು ಕ್ವಾರಂಟೈನ್ ಮಾಡಲಾಗಿದೆ. ಹೊರ ರಾಜ್ಯದಿಂದ ಈವರೆಗೆ ಬಂದಿರುವ 730 ಜನರನ್ನು ವಿವಿಧ ಹಾಸ್ಟೆಲ್, ಸಮುದಾಯ ಭವನಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. 130 ಜನರು ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿನ ವೆಂಟಿಲೇಟರ್‌ಗಳನ್ನು ಸಾಮಾನ್ಯ ರೋಗಿಗಳಿಗೆ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಈ ವಾರದಲ್ಲಿ ಸರ್ಕಾರಿ ಆಸ್ಪತ್ರೆಗೆ 7 ವೆಂಟಿಲೇಟರ್ ತಲುಪಲಿದೆ. ವೈದ್ಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸೇರಿ ಇತರ ಸಲಕರಣೆಯನ್ನು ಸರ್ಕಾರ ಪೂರೈಸಿದೆ ಎಂದು ಹೇಳಿದರು.
ಜಪಾನ್‌ನಂತೆ ಅಭಿವೃದ್ಧಿ: ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಪ್ರಧಾನಿ ಮೋದಿ ಸಾಕಷ್ಟು ಯೋಜನೆ ರೂಪಿಸಿದ್ದಾರೆ. ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಎರಡನೇ ವಿಶ್ವ ಯುದ್ಧದ ಬಳಿಕ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಜಪಾನ್ ಕೆಲವೇ ದಿನಗಳಲ್ಲಿ ಅಭಿವೃದ್ಧಿ ಸಾಧಿಸಿ ತನ್ನ ಶಕ್ತಿಯನ್ನು ಹೇಗೆ ಪ್ರದರ್ಶಿಸಿತೋ ಭಾರತ ಕೂಡ ಹಾಗೆ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ಸಮಯೋಚಿತ ನಡೆ: ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ಭಾರತದ ಅರ್ಥ ವ್ಯವಸ್ಥೆಗೆ ಹೊಸ ರೂಪ ನೀಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಪ್ಯಾಕೇಜ್‌ನಿಂದ ಬಹಳಷ್ಟು ಅನುಕೂಲವಾಗಿದೆ. ಈ ಕಾರಣಕ್ಕೆ ಪ್ರಧಾನಿಗೆ ನಾವೆಲ್ಲರೂ ಧನ್ಯವಾದ ಸಲ್ಲಿಸಬೇಕಿದೆ ಎಂದರು.
ಮಾಜಿ ಸಚಿವ ಎ.ಮಂಜು ಮಾತನಾಡಿ, ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿರುವುದು ಎಲ್ಲರ ಹೆಮ್ಮೆ. ಇಷ್ಟೊಂದು ಬೃಹತ್ ಅನುದಾನದ ಪ್ಯಾಕೇಜ್ ಘೋಷಿಸಿ ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ ಎಂದರು.
ಮಾಜಿ ಶಾಸಕ ಬಿ.ಆರ್.ಗುರುದೇವ್, ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ವಿಕ್ರಂ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.