

ಬೋರಗಾಂವ: ಸರ್ಕಾರ ಬಡಜನರ ಆರೋಗ್ಯ ಸುಧಾರಣೆಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಅವು ಜನರನ್ನು ತಲುಪುತ್ತಿಲ್ಲ. ಅದಕ್ಕೆ ಸಾಕ್ಷಿ ಇದ್ದೂ ಇಲ್ಲಂದತಿರುವ ಬೇಡಕಿಹಾಳ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ.
ವೈದ್ಯಾಧಿಕಾರಿಗಳು, ಸಿಬ್ಬಂದಿ ಕೊರತೆ ಸೇರಿ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಬೇಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಜನರು ಆರೋಗ್ಯ ಸಮಸ್ಯೆ ಹೊತ್ತು ಬಂದರೆ ವೈದ್ಯರಿಲ್ಲದೆ ಪರದಾಡಬೇಕಾಗುತ್ತಿದೆ. ಕೇಂದ್ರದಲ್ಲಿ ಕಾಯಂ ವೈದ್ಯರು ಸೇರಿ ಅನೇಕ ಹುದ್ದೆಗಳು ಖಾಲಿ ಇವೆ. ಸಾರ್ವಜನಿಕರಿಗೆ ಯೋಗ್ಯ ಚಿಕಿತ್ಸೆ ಸಿಗದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಜನರ ಸಮಸ್ಯೆಗೆ ಸ್ಪಂದಿಸಲು ವೈದ್ಯರೆ ಇಲ್ಲ. ಈ ಮೊದಲು ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಅವರು 15 ದಿನ ಕೋವಿಡ್ ಸೆಂಟರ್‌ನಲ್ಲಿ ಕೆಲಸ ಮಾಡಿ, ಅಕ್ಟೋಬರ್ ಮೊದಲ ವಾರದಲ್ಲಿ ವರ್ಗಾವಣೆ ಆಗಿದ್ದಾರೆ. ಆದರೆ, ತೆರವಾದ ಸ್ಥಾನಕ್ಕೆ ಈವರೆಗೂ ವೈದ್ಯಾಧಿಕಾರಿ ನೇಮಕ ಮಾಡಿಲ್ಲ.
ಹಲವು ಗ್ರಾಮಸ್ಥರಿಗೆ ತೊಂದರೆ: ಬೇಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬೇಡಕಿಹಾಳ, ಚಾಂದಶಿರದವಾಡ, ಶಮನೇವಾಡಿ ಮತ್ತು ನೇಜ ಗ್ರಾಮಸ್ಥರಿಗೆ ಅನುಕೂಲವಿದೆ. ದಿನನಿತ್ಯ ಸುಮಾರು 150 ಜನ ತಪಾಸಣೆಗೆ ಬರುತ್ತಾರೆ. ಆದರೆ, ಅಗತ್ಯ ವೈದ್ಯ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಹಾಗೂ ಮಹಿಳೆಯರಿಗೆ ನಿರಾಸೆ ಉಂಟಾಗಿದೆ.
ಸರ್ಕಾರ ಗರ್ಭಿಣಿಯರಿಗೆ, ಬಾಣಂತಿಯರಿಗೆ ನೀಡುವ ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ, ತಾಯಿ ಭಾಗ್ಯ ಸೇರಿ ವಿವಿಧ ಯೋಜನೆಗಳು ನಾಗರಿಕರಿಗೆ ಸರಿಯಾಗಿ ಸಿಗದೆ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ವೈದ್ಯರ ನೇಮಿಸಿ ಮತ್ತು ಸಿಬ್ಬಂದಿ ಕೊರತೆ ನೀಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಬೇಡಕಿಹಾಳ, ಚಾಂದಶಿರದವಾಡ ಹಾಗೂ ನೇಜ, ಶಮನೇವಾಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾರದಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಬೇಡಕಿಹಾಳಕ್ಕೂ ವಾರದಲ್ಲಿ ಮೂರು ದಿನ ಸೇವೆಗೆ ನೇಮಕ ಮಾಡಲಾಗಿದೆ. ಎಂಬಿಬಿಎಸ್ ಪದವಿ ಪಡೆದ ವೈದ್ಯರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿದ್ದರೆ ತಕ್ಷಣ ಜಿಲ್ಲಾ ಅಥವಾ ತಾಲೂಕು ಆರೋಗ್ಯ ಇಲಾಖೆಗೆ ಸಂಪರ್ಕಿಸಬಹುದು. ಅವರನ್ನು ತಿಂಗಳೊಳಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ನೇಮಕ ಮಾಡಲಾಗುವುದು. | ವಿ.ವಿ.ಶಿಂಧೆ ತಾಲೂಕು ವೈದ್ಯಾಧಿಕಾರಿ ಚಿಕ್ಕೋಡಿ