ಆರೋಗ್ಯವೇ ಮನುಷ್ಯನ ನಿಜವಾದ ಆಸ್ತಿ

21 HRR
Published on

ಹರಿಹರ: ಸದೃಢ ಆರೋಗ್ಯವೇ ಮನುಷ್ಯನ ನಿಜವಾದ ಆಸ್ತಿ, ಆರೋಗ್ಯ ಇಲ್ಲದಿದ್ದರೆ ದುಡಿದ ಸಂಪತ್ತನ್ನು ಅನುಭವಿಸಲು ಸಾಧ್ಯವಾಗದು ಎಂದು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೌತಮ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಭಾರತೀಯ ಯುವ ರೆಡ್​ಕ್ರಾಸ್ ಘಟಕ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಸದೃಢ ಆರೋಗ್ಯ ಹಾಗೂ ದೈಹಿಕ ಸ್ವಚ್ಚತೆಯ ಜತೆಗೆ ಪೌಷ್ಟಿಕಾಂಶಯುತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ದುಷ್ಚಟಗಳಿಂದ ದೂರವಿರಬೇಕು ಎಂದರು.

ರಸ್ತೆ ಅಪಘಾತ, ಎತ್ತರದಿಂದ ಬೀಳುವ ಅಥವಾ ಇತರೆ ಅಪಘಾತಗಳಲ್ಲಿ ಗಾಯಾಳುಗಳಿಗೆ ರಕ್ತಸ್ರಾವ, ಮೂಳೆ ಮುರಿತವಾಗುತ್ತದೆ. ಆಗ ರಕ್ತ ಸೋರಿಕೆ ತಡೆಯುವುದು ಹಾಗೂ ಮುರಿದ ಮೂಳೆಗಳು ಇನ್ನಷ್ಟು ಸೀಳದಂತೆ ಎಚ್ಚರಿಕೆ ವಹಿಸಿ ಪ್ರಥಮ ಚಿಕಿತ್ಸೆ ನೀಡಿ ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಮಾಜಿ ಸದಸ್ಯ ಡಾ. ಸೈಯದ್ ನಾಸಿರುದ್ದೀನ್ ಮಾತನಾಡಿ, ಗ್ರಾಮೀಣ ಭಾಗದಿಂದ ನಗರಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ಬಹುತೇಕ ವಿದ್ಯಾರ್ಥಿಗಳು ಹಸಿವನ್ನು ನಿವಾರಿಸಿಕೊಳ್ಳಲು ಎಗ್​ರೈಸ್, ಚಿಕನ್ ಕಬಾಬ್, ಬೇಕರಿಯಂತಹ ಫಾಸ್ಟ್​ಫುಡ್ ಸೇವನೆ ಮಾಡುತ್ತಾರೆ. ಇದರಿಂದ ಬಾಯಿಗೆ ರುಚಿ ಸಿಗಬಹುದು ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನೆಯಿಂದಲೇ ಊಟ ತರುವುದು ಸೂಕ್ತ ಎಂದರು.

ನಾಯಿ, ಹಾವು, ಚೇಳು ಕಚ್ಚಿದಾಗ ಹಾಗೂ ಅಗ್ನಿ ಅನಾಹುತ, ವಿದ್ಯುತ್ ಸ್ಪರ್ಶ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಥಮ ಚಿಕಿತ್ಸೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಪ್ರಾಚಾರ್ಯ ಡಾ.ಎಂ.ಎನ್. ರಮೇಶ್ ಮಾತನಾಡಿ, ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಆಸ್ಪತ್ರೆ ಸಾಗಿಸುವ ಮೊದಲು ಪ್ರಥಮ ಚಿಕಿತ್ಸೆ ಅತ್ಯವಶ್ಯಕವಾಗಿರುತ್ತದೆ, ಇದರಿಂದ ಅರ್ಧ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಐಕ್ಯೂಎಸಿ ಸಂಯೋಜಕ ಡಾ.ಎಚ್.ಪಿ. ಅನಂತನಾಗ್, ರೆಡ್​ಕ್ರಾಸ್ ಘಟಕ ಸಂಯೋಜಕ ಡಾ.ಬಿ.ಕೆ. ಮಂಜುನಾಥ್, ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಬಶೀರ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ. ಕುಮಾರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್. ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net