

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದಲ್ಲಿ ಮಧುಮೇಹವು ಸಾರ್ವಜನಿಕ ಆರೋಗ್ಯ ಸವಾಲಾಗಿ ಹೊರಹೊಮ್ಮಿದೆ. ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದ ಮಧುಮೇಹ ಮತ್ತು ಸ್ಥೂಲಕಾಯದ ಹರಡುವಿಕೆಯು ಗಗನಕ್ಕೇರಿದೆ. ಭಾರತದಲ್ಲಿ ಪ್ರಸ್ತುತ 77 ಮಿಲಿಯನ್ ಮಧುಮೇಹಿಗಳಿದ್ದು, ಮುಂಬರುವ ವರ್ಷಗಳಲ್ಲಿ ಗಮನಾರ್ಹವಾಗಿ ಏರುವ ನಿರೀಕ್ಷೆ ಇದೆ ಎಂದು ಹುಬ್ಬಳ್ಳಿಯ ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಹೇಳಿದರು.
ನಗರದ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೈ ಕಾಲು ಸಣ್ಣಗೆ, ಹೊಟ್ಟೆಯ ಮೇಲೆ ಅತಿಯಾದ ಕೊಬ್ಬು ಹೃದಯಾಘಾತ, ಟೈಪ್ 2 ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಕಾರಣವಾಗುತ್ತಿದೆ. ಭಾರತೀಯ ಸಾಂಪ್ರದಾಯಿಕ ಆಹಾರ ಎಲ್ಲ ಪೋಷಕಾಂಶಗಳಿ0ದ ಸಮೃದ್ಧವಾಗಿದೆ. ಫಾಸ್ಟ್ ಫುಡ್ (ತ್ವರಿತ ಆಹಾರ) ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದರು.
ಈ ಬಿಕ್ಕಟ್ಟನ್ನು ಎದುರಿಸಲು ಸರ್ಕಾರದ ಉಪಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳು ಅಗತ್ಯ. ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು ಉತ್ತೇಜಿಸುವುದು, ದೈಹಿಕ ಚಟುವಟಿಕೆಗೆ ಒತ್ತು ನೀಡುವುದು ಮತ್ತು ಪೌಷ್ಠಿಕಾಂಶದ ಬಗ್ಗೆ ಸಮುದಾಯಗಳಿಗೆ ಶಿಕ್ಷಣ ನೀಡುವುದರಿಂದ ಮಧುಮೇಹ ನಿಯಂತ್ರಣ ಸಾಧ್ಯ. ಮಧುಮೇಹ ನಿಯಂತ್ರಣಕ್ಕೆ ಪ್ರತಿದಿನ 45 ನಿಮಿಷ ವಾಕಿಂಗ್ ಅಥವಾ ಆಟ, ನಿಯಮಿತ ವ್ಯಾಯಾಮ ಅಗತ್ಯ. ಹಣ್ಣು ಮತ್ತು ತರಕಾರಿಗಳ ಬಳಕೆ, ಸಕ್ಕರೆ ಮತ್ತು ಉಪ್ಪನ್ನು ಮಿತವಾಗಿ ಬಳಸಬೇಕು ಎಂದರು.
ಎಸ್‌ಡಿಎ0 ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಕಿರಣ ಐತಾಳ್, ರಾಘವೇಂದ್ರ ಬೆಳಗಾಂವಕರ, ಇತರರಿದ್ದರು. ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.