ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯಾಗಬೇಕು

MDK01
Published on

ಮಡಿಕೇರಿ: ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದು ಆದಷ್ಟು ಶೀಘ್ರವಾಗಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನುಭವಿ ತಜ್ಞ ವೈದ್ಯರು ಒಟ್ಟಾಗಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಪೂರಕವಾಗಿ ತಾನು ಯಾವುದೇ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದು ನಿವೃತ್ತ ಲೆ.ಜ. ಡಾ. ಬಿ.ಎನ್.ಬಿ.ಎಂ. ಪ್ರಸಾದ್‌ರವರು ಭರವಸೆ ನೀಡಿದರು.


ಮಡಿಕೇರಿಯ ಪತ್ರಿಕಾಭವನದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಜನ ಇಲ್ಲಿನ ಪರಿಸರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶ ಸೇವೆಗಾಗಿ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಯದ್ದಾಗಿದೆ. ಕೊಡಗಿನ ಹಿರಿಮೆ ಇಲ್ಲಿಯವರಿಗೆ ತಿಳಿದಿಲ್ಲ.ಆದರೆ ಉತ್ತರ ಭಾರತದ ಜನತೆಗೆ ಕೊಡಗಿನ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಕೊಡಗನ್ನು ದಕ್ಷಿಣದ ಕಾಶ್ಮೀರ ಎಂದು ಬಣ್ಣಿಸಿದ್ದರು. ಇದಕ್ಕೆ ಇಲ್ಲಿನ ಪರಿಸರ ಮುಖ್ಯ ಕಾರಣ. ಅದನ್ನು ಸಂರಕ್ಷಿಸುವ ಕಾರ್ಯವಾಗಬೇಕು ಎಂದು ಬಿ.ಎನ್.ಬಿ.ಎಂ.ಪ್ರಸಾದ್ ಕಿವಿಮಾತು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ಪತ್ರಕರ್ತರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗಲಿದೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಒಂದೇ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ನುಡಿದರು.


ವಿದ್ಯಾವಂತರ ಅಗತ್ಯವಿದೆ: ದೇಶಕ್ಕೆ ಇಂದು ವಿದ್ಯಾವಂತ ರಾಜಕಾರಣಿಗಳ ಅವಶ್ಯಕತೆಯಿದೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಂದರೆ ಉತ್ತಮ. ದೇಶಕಟ್ಟುವ ಕೆಲಸ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಪತ್ರಕರ್ತರೂ ಕೂಡಾ ಮುಖ್ಯ. ನಾವೆಲ್ಲರೂ ತಂಡವಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.


ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ಉತ್ತಮ ಪ್ರಭಾವ ಬೀರಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು. ಇಂದು ಸಮೂಹ ಮಾಧ್ಯಮ ಶಕ್ತಿಶಾಲಿಯಾಗಿದೆ. ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ತಿಳಿಸಿಕೊಡುವ ಕರ್ತವ್ಯ ಪತ್ರಕರ್ತರದ್ದು ಎಂದು ಹೇಳಿದರು.


ರೆಡ್ ಕ್ರಾಸ್‌ನ ಕೊಡಗು ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿದರು.
ಪ್ರಶಸ್ತಿ ವಿತರಣೆ: ಕಾರ್ಯಕ್ರಮದಲ್ಲಿ ವಾರ್ಷಿಕ ಕ್ರೀಡಾ ವರದಿಗೆ ಪ್ರಶಸ್ತಿ ಭಾಜನರಾಗಿದ್ದ ಕನ್ನಡಪ್ರಭ ವರದಿಗಾರ ವಿಘ್ನೇಶ್ ಭೂತನಕಾಡು, ಗ್ರಾಮೀಣ ವರದಿ ಪ್ರಶಸ್ತಿ ಪಡೆದ ಪ್ರತಿನಿಧಿ ವರದಿಗಾರ ಸುರೇಶ್ ಬಿಳಿಗೇರಿ, ಕೃಷಿ ವರದಿಗೆ ವಿಜಯ ಕರ್ನಾಟಕ ವರದಿಗಾರ ಕವನ್ ಕಾರ್ಯಪ್ಪ, ಮಾನವೀಯ ವರದಿಗೆ ಶಕ್ತಿ ಪತ್ರಿಕೆಯ ಕೆ.ಎಸ್. ಮೂರ್ತಿ, ಟಿ.ವಿ. ವಾಹಿನಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಟಿವಿ ಒನ್ ಸುದ್ದಿ ವಾಹಿನಿಯ ಪ್ರಸಾದ್ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಅಲ್ಲದೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರವರಿಗೆ ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧಿಕೃತ ವೆಬ್‌ಸೈಟ್ ಅನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಸಂಘದ ಸಲಹೆಗಾರ ಎಚ್.ಟಿ.ಅನಿಲ್, ಪತ್ರಕರ್ತರಾದ ಕೆ.ತಿಮ್ಮಪ್ಪ, ರಂಜಿತ್ ಕವಲಪಾರ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


ಭ್ರಷ್ಟಾಚಾರ ಕಂಡುಬಂದರೆ ಮಾಹಿತಿ ನೀಡಿ!

ಭ್ರಷ್ಟಾಚಾರ ದಿನನಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿದೆ. ಎಲ್ಲಾ ಬದಲಾವಣೆ ಆಗಬೇಕಾದರೆ ತಮ್ಮ ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಯಾವುದಾದರೂ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಅಥವಾ ರಾಜಕಾರಣಿಗಳು ಭ್ರ?್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದರೆ ಕೂಡಲೇ ನನಗೆ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕೊಡಗಿನಲ್ಲಿ ೧೩ ವಿದ್ಯುತ್ ಕೇಂದ್ರ ಅಭಿವೃದ್ಧಿ
ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಸಾಕಷ್ಟಿದೆ. ಇದೀಗ ಜಿಲ್ಲೆಯಲ್ಲಿ ಹೊಸದಾಗಿ ೧೩ ವಿದ್ಯುತ್ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ತಿಳಿಸಿದರು. ಕೊಡಗಿನಲ್ಲಿ ಹೊಸ ಕೇಂದ್ರಗಳು ಆರಂಭವಾದಲ್ಲಿ ವಿದ್ಯುತ್ ಸಮಸ್ಯೆಗೆ ಮುಕ್ತಿ ದೊರಕಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿದ್ದೇವೆ. ರಾಜ್ಯದಲ್ಲಿ ೧೫ ಸಾವಿರ ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ತಾನು ಕೆಲಸ ನಿರ್ವಹಿಸಿದ ಬಳಿಕ ವಿದ್ಯುತ್ ಕೇಂದ್ರಗಳ ಸುಧಾರಣೆಗೆ ಕ್ರಮ ಕೈಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net