

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರಮುಖ ವೈದ್ಯಕೀಯ ಕಾಲೇಜುಗಳು ಅಕ್ಟೋಬರ್, ನವೆಂಬರ್‌ನಲ್ಲಿ ಹಂತ ಹಂತವಾಗಿ ತರಗತಿ ಪುನರಾರಂಭಿಸಲು ಸಿದ್ಧತೆ ಮಾಡಿಕೊಂಡಿವೆ.
ಇದರಿಂದಾಗಿ 6 ತಿಂಗಳಿಂದ ಮುಚ್ಚಿರುವ ಕಾಲೇಜು ಕ್ಯಾಂಪಸ್‌ಗಳು ನಿಧಾನವಾಗಿ ಮತ್ತೆ ಜೀವಕಳೆ ಪಡೆಯುವ ಆಶಾಭಾವ ಮೂಡಿದೆ. ಕೆಲವು ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಕಾಲೇಜುಗಳು ಅಕ್ಟೋಬರ್‌ನಿಂದ ತರಗತಿ ಶುರು ಮಾಡಲು ಸಿದ್ಧತೆ ನಡೆಸಿವೆ. ನಿಟ್ಟೆ ವಿವಿಯ ಎಂಬಿಬಿಎಸ್, ಬಿಡಿಎಸ್ ವಿದ್ಯಾರ್ಥಿಗಳಿಗೆ ಈ ಅಕ್ಟೋಬರ್‌ನಿಂದ ತರಗತಿ ಪ್ರಾರಂಭಿಸುವ ಉದ್ದೇಶವಿದ್ದು ಅಕ್ಟೋಬರ್ ಮೊದಲ ವಾರದಿಂದಲೇ ಕ್ಯಾಂಪಸ್‌ಗೆ ಬರುವಂತೆ ಸೂಚಿಸಲಾಗಿದೆ.
ಪ್ರತೀ ಬ್ಯಾಚಿನ ವಿದ್ಯಾರ್ಥಿಗಳ ಬರುವಿಕೆಯ ನಡುವೆ ಒಂದು ವಾರದ ಅಂತರ ಇರಿಸಲಾಗುವುದು. ಆ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ನಿಯೋಜಿಸುವುದಿಲ್ಲ, ಬದಲಿಗೆ ಪ್ರಾಕ್ಟಿಕಲ್ ತರಗತಿ ಆಯೋಜಿಸುವ ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಥಿಯರಿ ತರಗತಿ ಕಡಿಮೆ ಮಾಡುವ ಉದ್ದೇಶವಿದೆ ಎಂದು ನಿಟ್ಟೆ ವಿವಿ ಮೂಲಗಳು ತಿಳಿಸಿವೆ.
ಯೇನೆಪೊಯ ವಿವಿಯಲ್ಲೂ ಅಕ್ಟೋಬರ್ ಮಧ್ಯಭಾಗದಿಂದ ವೈದ್ಯಕೀಯ, ದಂತ ವೈದ್ಯಕೀಯ ತರಗತಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಕರೊನಾ ಟೆಸ್ಟ್ ಮಾಡಬೇಕಾಗುತ್ತದೆ. ಆ ಬಳಿಕವಷ್ಟೇ ಅವರನ್ನು ಹಾಸ್ಟೆಲ್‌ಗಳಿಗೆ ಕಳುಹಿಸಲಾಗುವುದು. ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರಾಕ್ಟಿಕಲ್ ತರಬೇತಿ ನೀಡುವ ಉದ್ದೇಶವಿದೆ. ಇತರ ಖಾಸಗಿ ವಿವಿಗಳಿಗೆ ಇನ್ನೂ ತರಗತಿ ಪ್ರಾರಂಭಿಸುವ ಬಗ್ಗೆ ಸ್ಪಷ್ಟತೆ ಇಲ್ಲ, ಸರ್ಕಾರದಿಂದ ಅಧಿಕೃತ ಆದೇಶ ಬಂದ ಬಳಿಕವಷ್ಟೇ ಹೇಳಬಹುದು.
ಇಂಜಿನಿಯರಿಂಗ್ ಅಸ್ಪಷ್ಟ
ಸಿಇಟಿ ಕೌನ್ಸೆಲಿಂಗ್ ಶುರುವಾಗದ ಕಾರಣ ಮೊದಲ ಸೆಮಿಸ್ಟರ್ ಇಂಜಿನಿಯರಿಂಗ್ ಶುರುವಾಗಿಲ್ಲ, ಉಳಿದಂತೆ ಇತರ ಸೆಮಿಸ್ಟರ್‌ನವರಿಗೆ ಸೆಪ್ಟೆಂಬರ್‌ನಿಂದಲೇ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇನ್ನೂ ಸಿಇಟಿ ಕಾಮೆಡ್ ಕೆ ಮೂಲಕ ಪ್ರವೇಶಾತಿ ನಡೆಯದ ಕಾರಣ ಮೊದಲ ಸೆಮಿಸ್ಟರ್ ಪ್ರಾರಂಭಿಸಿಲ್ಲ. ಆದರೆ ಮ್ಯಾನೇಜ್‌ಮೆಂಟ್ ಕೋಟಾದವರಿಗೆ ಅ.5ರಿಂದ ಆನ್‌ಲೈನ್ ಮೂಲಕ ಬ್ರಿಜ್ ಕೋರ್ಸ್ ಪ್ರಾರಂಭಿಸುತ್ತೇವೆ ಎಂದು ನಿಟ್ಟೆ ಶಿಕ್ಷಣ ಟ್ರಸ್ಟ್ ಉಪನಿರ್ದೇಶಕಿ(ಆಡಳಿತ) ಪ್ರಸನ್ನ ಹೆಗ್ಡೆ ಹೇಳುತ್ತಾರೆ. ಎನ್‌ಐಟಿಕೆಯಲ್ಲಿ ಆಫ್‌ಲೈನ್ ಕ್ಲಾಸ್‌ಗಳು ಏನಿದ್ದರೂ 2021ರ ಜನವರಿಯಿಂದ ನಡೆಯಲಿವೆ. ಸದ್ಯ ಆನ್‌ಲೈನ್ ತರಗತಿಗಳೇ ಮುಂದುವರಿಯಲಿವೆ.
ಪದವಿ ತರಗತಿ ಮತ್ತಷ್ಟು ವಿಳಂಬ
ಪದವಿ ಆಫ್‌ಲೈನ್ ತರಗತಿಗಳನ್ನು ನವೆಂಬರ್ ವೇಳೆಗೆ ತರಗತಿ ಶುರು ಮಾಡುವ ಉದ್ದೇಶವನ್ನು ಮಂಗಳೂರು ವಿವಿ ಹೊಂದಿದೆ. ಸದ್ಯ ಪದವಿ, ಸ್ನಾತಕೋತ್ತರ ಪರೀಕ್ಷೆ ನಡೆಯುತ್ತಿವೆ, ಅ.15ಕ್ಕೆ ಮುಗಿದ ಬಳಿಕ, ತರಗತಿ ಪ್ರಾರಂಭಿಸಲು ಸಿದ್ಧತೆ ನಡೆಸಿ, ನವೆಂಬರ್ ಮೊದಲ ವಾರದಿಂದ ತರಗತಿ ಶುರು ಮಾಡಬಹುದು ಎಂದು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳುತ್ತಾರೆ. ಆದರೆ ನವೆಂಬರ್ ಅಂತ್ಯದವರೆಗೆ ತರಗತಿ ಆರಂಭಿಸದಂತೆ ಯುಜಿಸಿ ಸೂಚಿಸಿರುವುದಿಂದ ಸರ್ಕಾರವೂ ನಿರ್ಧಾರ ಪ್ರಕಟಿಸಿಲ್ಲ. ಆನ್‌ಲೈನ್ ತರಗತಿಗಳು ನಡೆಯುವ ಸಾಧ್ಯತೆಗಳಿವೆ.
ಇಂಜಿನಿಯರಿಂಗ್ ಪ್ರವೇಶಾತಿ, ತರಗತಿ ಪ್ರಾರಂಭ ಬಗ್ಗೆ ವಾರದೊಳಗೆ ನಿರ್ದೇಶನಗಳು ಸರ್ಕಾರದಿಂದ ಬರುವ ಪ್ರತೀಕ್ಷೆಯಲ್ಲಿದ್ದೇವೆ, ಸದ್ಯ ಆನ್‌ಲೈನ್ ಮೂಲಕ ಇತರ ಸೆಮಿಸ್ಟರ್‌ನವರಿಗೆ ತರಗತಿ ನಡೆಯುತ್ತಿದೆ.
-ವಿಶಾಲ್ ಹೆಗ್ಡೆ, ಟ್ರಸ್ಟಿ, ನಿಟ್ಟೆ ಶಿಕ್ಷಣ ಟ್ರಸ್ಟ್
ದೈಹಿಕ ಅಂತರ ಪಾಲನೆ ನಿಟ್ಟಿನಲ್ಲಿ ಮಣಿಪಾಲ ಹೆಲ್ತ್‌ಸೈನ್ಸ್ ವಿಭಾಗದ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿಗೆ ಆನ್‌ಲೈನ್ ಮತ್ತು ಉಳಿದವರಿಗೆ ತರಗತಿ ನಡೆಸಲು ಮಾಹೆ ಉದ್ದೇಶಿಸಿದೆ. ವಾರಕ್ಕೊಮ್ಮೆ ವಿದ್ಯಾರ್ಥಿಗಳ ತಂಡ ಬದಲಾಗಲಿದೆ. ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಥಿಯರಿ ಕ್ಲಾಸ್‌ಗಳು ಆನ್‌ಲೈನ್‌ನಲ್ಲೇ ನಡೆಯುತ್ತಿದ್ದು, ಪ್ರಾಕ್ಟಿಕಲ್ ಕ್ಲಾಸ್‌ಗಳನ್ನೂ ಲ್ಯಾಬ್‌ಗಳಲ್ಲಿ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ತರಗತಿ ಪ್ರಾರಂಭ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ.
ಲೆ.ಜ.ಎಂ.ಡಿ.ವೆಂಕಟೇಶ್, ವೈಸ್ ಚಾನ್ಸಲರ್, ಮಾಹೆ, ಮಣಿಪಾಲ
ನಮ್ಮ ಕಾಲೇಜಿನಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ ಪಾಳಿಯಂತೆ ಅಂತರ ಪಾಲಿಸಿಕೊಂಡು ಕ್ಲಿನಿಕಲ್ ಲ್ಯಾಬ್‌ನಲ್ಲಿ ತರಗತಿ ನಡೆಯಲಿದೆ. ಥಿಯರಿ ತರಗತಿಗಳು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ.
ಡಾ.ಕೃಷ್ಣ ಪ್ರಸಾದ್, ಮುಖ್ಯಸ್ಥ, ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು