

ನೆಲಮಂಗಲ : ಗ್ರಾಮೀಣ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಕುರಿತು ಶ್ರೀಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಶ್ರೀ ಸದಾಶಿವ ಸ್ವಾಮೀಜಿಗಳ ನಿರಂಜನ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ 57 ಪರಮಪೂಜ್ಯರ ಪಾದ ಪೂಜೆ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ಇತಿಹಾಸ, ಸಂಸತಿ ಉಳಿಸಿ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವಲ್ಲಿ ಮಠಮಾನ್ಯಗಳಿಂದ ಪಾತ್ರ ದೊಡ್ಡದಿದೆ. ನನ್ನ 55 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಮಠಗಳಿಗೆ ಭೇಟಿ ನೀಡಿದ್ದೇನೆ. ಸಮಾಜಮುಖಿ ಕೆಲಸ ನೋಡಿದ್ದೇನೆ. ಆದರೆ, ನೆಲಮಂಗಲದ ಬಸವಣ್ಣ ದೇವರ ಮಠದ ಸ್ವಾಮೀಜಿ ಹಿರಿಯ ಶ್ರೀಗಳ ಸುವರ್ಣ ಮಹೋತ್ಸವದ ಹೆಸರಿನಲ್ಲಿ ರಾಜ್ಯದ 57 ಮಂದಿ ಗುರುಗಳನ್ನು ಒಂದೇ ವೇದಿಕೆಯಲ್ಲಿ ಪಾದಪೂಜೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. 12ನೇ ಶತಮಾನದಲ್ಲಿ ಬಸವಣ್ಣ, 15ನೇ ಶತಮಾನದಲ್ಲಿ ತೋಟದ ಸಿದ್ದಲಿಂಗೇಶ್ವರ ಶ್ರೀಗಳು, ಅದರಂತೆ 21ನೇ ಶತಮಾನದಲ್ಲಿ ತ್ರಿವಿಧ ದಾಸೋಹಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿನಿರ್ವಾಣ ಸ್ವಾಮೀಜಿ, ಗದ್ದುಗೆ ಮಠದ ಶ್ರೀ ಮಹಂತಸ್ವಾಮೀಜಿ, ಬೇಲಿ ಮಠದ ಶ್ರೀಶಿವರುದ್ರ ಮಹಾಸ್ವಾಮಿ, ಕುಣಿಗಲ್ ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಂ.ವಿ.ನಾಗರಾಜು, ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಜಿ.ಆನಂದ್, ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯರಾದ ಸಿ.ಪ್ರದಿಪ್, ಲೋಲಾಗಂಗಾಧರ್, ನೆ.ಯೋ.ಪ್ರಾಧಿಕಾರ ಮಾಜಿ ಅದ್ಯಕ್ಷ ಎಸ್.ಮಲ್ಲಯ್ಯ ಉಪಸ್ಥಿತರಿದ್ದರು.
ಧರ್ಮರಕ್ಷಣೆಗೆ ನಿಂತ ಮೋದಿ : ರೈತರು, ಮಧ್ಯಮ ವರ್ಗದ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯವಸ್ತುವಿನ ಮೇಲೆ ಶೇ.18 ಇದ್ದ ಜಿಎಸ್ಟಿಯನ್ನು ಕಡಿತಗೊಳಿಸಿ, ಶೇ.5ಕ್ಕೆ ಇಳಿಸಿ ಮಹತ್ವದ ಕೊಡುಗೆಯಾಗಿದೆ. ದೇಶದ ಎಲ್ಲ ಸಾಧುಸಂತರು, ಸ್ವಾಮೀಜಿಗಳ ಆಶೀರ್ವಾದ ಪ್ರಧಾನಮಂತ್ರಿಗಳ ಮೇಲಿದ್ದು, ಧರ್ಮರಕ್ಷಣೆ ಹಾಗೂ ದೇಶವನ್ನು ಉಳಿಸುವ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಸಂಸದ ಡಾ.ಸುಧಾಕರ್ ಹೇಳಿದರು.
ಕೃತಿಗಳ ಲೋಕಾರ್ಪಣೆ : ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಶಿವಕುಮಾರ ಸ್ವಾಮೀಜಿ ಹೇಳಿದ ಕಥೆಗಳ ಭಾಗ 123 ಹಾಗೂ ಲಿಂಗಪೂಜಾ ವಿಧಾನ ಸೇರಿ ವಿವಿಧ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಸಾಮೂಹಿಕ ಪಾದಪೂಜೆ : ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಸುಮಾರು 57 ಸ್ವಾಮೀಜಿಗಳ ಪಾದಪೂಜೆ ಮಾಡಲಾಯಿತು. ಸ್ವಾಮೀಜಿಗಳಿಗೆ ಶ್ರೀಮಠದಿಂದ ವಿಭೂತಿ, ರುದ್ರಾ, ಹಾಗೂ ವಿವಿಧ ಗ್ರಂಥಗಳನ್ನು ವಿತರಣೆ ಮಾಡಲಾಯಿತು.
1971ರಲ್ಲಿ ಪಟ್ಟಾಧಿಕಾರ ಪಡೆದ ಸದಾಶಿವ ಸ್ವಾಮೀಜಿ 2002ರಲ್ಲಿ ಲಿಂಗೈಕ್ಯರಾಗಿದ್ದು, ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ನಿರಂತರವಾಗಿ ಸಮಾಜಸೇವೆ ನಡೆಸುತ್ತಿಕೊಂಡು ಬರಲಾಗುತ್ತಿದೆ. ಸದಾಶಿವಾ ಸ್ವಾಮೀಜಿ ಮಠಾಧೀಶರಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಂಗಮ ಪಾದ ಪೂಜೆ ಮಾಡಿದ್ದು ಜೀವನದ ಸೌಭಾಗ್ಯವಾಗಿದೆ. ಶ್ರೀಗಳ ಮಾರ್ಗದರ್ಶನ ಸದಾ ಸ್ಫೂರ್ತಿದಾಯಕ. > ಶ್ರೀಸಿದ್ದಲಿಂಗಸ್ವಾಮೀಜಿ ಪವಾಡ ಶ್ರೀಬಸವಣ್ಣ ದೇವರಮಠ