ಜನರಲ್ ಆಸ್ಪತ್ರೆ ಇನ್ನು ವೈದ್ಯಕೀಯ ಕಾಲೇಜು: ಮೆಡಿಕಲ್ ಕಾಲೇಜು ಆಸ್ಪತ್ರೆ ಭಾಗವಾಗಿ ಕಾರ್ಯಾಚರಣೆ

New Project (7)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನಗರದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಆಸ್ಪತ್ರೆ ಇನ್ನು ಮುಂದೆ ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೇರಲಿದ್ದು, ಇದರ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾಚರಿಸಲಿದೆ.

ಈ ಬಗ್ಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಪ್ರಸಕ್ತ ಇರುವ ಸೌಲಭ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಭಾಗವಾಗಿ ಮುನ್ನಡೆಸಿಕೊಂಡು ಹೋಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸ್ಪತ್ರೆ ಆರೋಗ್ಯ ಸೇವಾ ನಿರ್ದೇಶಕರಿಂದ ಆರಂಭಗೊಂಡು ಎಲ್ಲ ವೈದ್ಯರು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನಿಡುವ ರೀತಿಯಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಲಿದೆ. ಕಟ್ಟಡ ಪೂರ್ಣಗೊಂಡರೂ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಮತ್ತೆ 3 ವರ್ಷ ಕಾಯಬೇಕು. ಈ ವಿಳಂಬ ತಪ್ಪಿಸಲು ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ.

ಉಕ್ಕಿನಡ್ಕದಲ್ಲಿ 2013ರಲ್ಲಿ ಆರಂಭಿಸಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಶಿಲಾನ್ಯಾಸ ನಡೆಸಿದ ಅಂದಿನಿಂದ 3 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ಇರಿಸಿಕೊಳ್ಳಲಾಗಿತ್ತು. ಆದರೆ 11ವರ್ಷ ದಾಟಿದರೂ ಕಾಮಗಾರಿ ಪೂರ್ತಿಗೊಳಿಸಲಾಗದಿರುವ ಬಗ್ಗೆ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಸರ್ಕಾರ ಮುಂದಾಗಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದೆ.

ಎಂಬಿಬಿಎಸ್ ಕೋರ್ಸ್ ಆರಂಭ

ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ತಗಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ 3 ವರ್ಷಗಳ ಸೇವಾ ಅನುಭವ ಜತೆಗೆ ಪ್ರತಿದಿನ ಕನಿಷ್ಠ 220 ಮಂದಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯಿದ್ದಲ್ಲಿ ಮಾತ್ರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡದನ್ವಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಗಲಿದೆ.

ಎಂಡೋ ಸಂತ್ರಸ್ತರಲ್ಲಿ ಆಶಾಕಿರಣ

ಹೊಸದಾಗಿ ಆರಂಭಗೊಳ್ಳಲಿರುವ ವೈದ್ಯಕೀಯ ಕಾಲೇಜಿಗೆ ವೈದ್ಯರ ನೇಮಕಾತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಮೀನಮೇಷ ಎಣಿಸಿದರೆ ಎರಡೂ ಯೋಜನೆಗಳು ವ್ಯರ್ಥವಾಗುವ ಸಾಧ್ಯತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಹೊಂದಿರುವ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಪಂಚಾಯಿತಿಗೆ ಅತ್ಯಂತ ಸನಿಹದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲೆಯೆತ್ತುತ್ತಿರುವುದು ಸಂತ್ರಸ್ತರಲ್ಲಿ ಭರವಸೆ ಮೂಡಿಸಿದೆ. ಸರ್ಕಾರ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳಬೇಕಾಗಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಿಫಾರಸು ನಡೆಸಿದ್ದು, ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಅನುಮೋದನೆಗಾಗಿ ಕಾಯಲಾಗುತ್ತಿದೆ. ಅಂಗೀಕಾರ ಲಭಿಸಿದ ತಕ್ಷಣ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಂದಿನ ಕಾರ್ಯಚಟುವಟಿಕೆ ಆರಂಭಗೊಳ್ಳಲಿದೆ. ಮುಂದೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಭಾಗವಾಗಿ ಜನರಲ್ ಆಸ್ಪತ್ರೆ ಕಾರ್ಯಾಚರಿಸಲಿದೆ. ಡಾ.ಶ್ರೀಕುಮಾರ್ ಸರ್ಕಾರಿ ಜನರಲ್ ಆಸ್ಪತ್ರೆ ಸೂಪರಿಂಟೆಂಡೆಂಟ್, ಕಾಸರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net