

ಚಿತ್ರದುರ್ಗ: ನಗರದಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ನಿರ್ಮಿಸಬೇಕು. ಅದಕ್ಕಾಗಿ ಕಾಮಗಾರಿ ಆರಂಭಿಸಲು ಭೂಮಿ ಪೂಜೆ ದಿನಾಂಕ ನಿಗದಿಗೊಳಿಸಬೇಕು ಎಂದು ಕರುನಾಡ ವಿಜಯಸೇನೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಈ ಬೇಡಿಕೆಗೆ ಸ್ಪಂದಿಸಲೇಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಕಾಲೇಜು ನಿರ್ಮಿಸುವಂತೆ ದಶಕಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಆದರೆ, ನೆಪಮಾತ್ರಕ್ಕೆ ಮಂಜೂರು ಮಾಡಲಾಗಿದೆ. ಈವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದು ಮೇಲ್ನೋಟಕ್ಕೆ ಚುನಾವಣಾ ಗಿಮಿಕ್ ರೀತಿ ಕಾಣುತ್ತಿದೆ ಎಂದು ದೂರಿದರು.
ಕಾಮಗಾರಿ ತ್ವರಿತವಾಗಿ ಆರಂಭವಾಗಬೇಕು. ಡೀನ್ ನೇಮಿಸುವ ಜತೆಗೆ ಅಗತ್ಯ ವೈದ್ಯಕೀಯ ಉಪಕರಣ ಖರೀದಿಗೆ ಸರ್ಕಾರ ಮುಂದಾಗಬೇಕು. ಕನಿಷ್ಠ 150 ಎಂಬಿಬಿಎಸ್ ಸೀಟುಗಳ ದಾಖಲಾತಿ ಪ್ರಾರಂಭಿಸಬೇಕು. ಇಲ್ಲದಿದ್ದರೆ, ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ, ಮುಖಂಡರಾದ ಜಗದೀಶ್, ಅಖಿಲೇಶ್, ಅವಿನಾಶ್, ನಾಗರಾಜ್ ಮುತ್ತು, ರೇಣುಕಮ್ಮ, ಅರ್ಜುನ, ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಕುಮಾರ್, ಜೆ.ಮಂಜುನಾಥ್, ಇ.ರಾಜಪ್ಪ, ಕೆ.ಗೌಸ್‌ಪೀರ್, ಪರಿಸರವಾದಿ ಎಚ್.ಎಸ್.ಕೆ.ಸ್ವಾಮಿ ಇತರರಿದ್ದರು.