ಎಂಡೋ ಸಂತ್ರಸ್ತ ಮಕ್ಕಳ ತಾಯಂದಿರಿಗಾಗಿ ಶಿಬಿರ : ಮಹಿಳಾ ಆಯೋಗ ಅಧ್ಯಕ್ಷೆ ಪಿ.ಸತಿದೇವಿ ಮಾಹಿತಿ

Published on

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ತಾಯಂದಿರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ವಕೀಲೆ ಪಿ.ಸತಿದೇವಿ ತಿಳಿಸಿದರು.

ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಪ್ರದೇಶದ ತಾಯಂದಿರಿಗಾಗಿ ಮಹಿಳಾ ಆಯೋಗ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ನಡೆಸಿದ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚರ್ಚೆಯಿಂದ ಹೊರಹೊಮ್ಮುವ ವಿಚಾರಗಳ ಕ್ರೋಡೀಕೃತ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿ ಮತ್ತು ಎಂಡೋಸಂತ್ರಸ್ತ ಮಕ್ಕಳನ್ನು ರಕ್ಷಿಸುವುದು ಸಾರ್ವಜನಿಕ ವಿಚಾರಣೆಯ ಪ್ರಮುಖ ಉದ್ದೇಶವಾಗಿದೆ. ಕಳೆದ ವರ್ಷದಿಂದ ರಾಜ್ಯ ಮಹಿಳಾ ಆಯೋಗದ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ವಿಚಾರಣೆ ನಡೆಸಲಾಗುತ್ತಿದೆ. ಕೆಲಸ ಮತ್ತು ಸಾಮಾಜಿಕ ಜೀವನದ ಎಲ್ಲ ವಿಷಯಗಳ ಬಗ್ಗೆ ವಿಶೇಷವಾಗಿ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಮಹಿಳಾ ಆಯೋಗದ ಸದಸ್ಯೆ ವಕೀಲೆ ಕುಞೌಯಿಷ ಅಧ್ಯಕ್ಷತೆ ವಹಿಸಿದ್ದರು. ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ. ಸುರ್ಜಿತ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್ ಮಾಹಿತಿ ನೀಡಿದರು. ಕೇರಳ ಮಹಿಳಾ ಆಯೋಗದ ಸಂಶೋಧನಾ ಅಧಿಕಾರಿ ಎ.ಆರ್.ಅರ್ಚನಾ ಚರ್ಚೆಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net