

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರ ನಡೆಯುತ್ತಿದ್ದು, ಇದರ ಪ್ರಯುಕ್ತ ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಿತು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಶಿಬಿರ ಉದ್ಘಾಟಿಸಿ ಮಾತನಾಡಿ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತಿಂಗಳಿಗೆ ಮೂರು ಅಥವಾ ನಾಲ್ಕು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಪೂಜ್ಯ ಹೆಗ್ಗಡೆ ಅವರ ನಿರ್ದೇಶನದಂತೆ ತಿಂಗಳಿಗೆ 2 ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತದೆ. ಕನಿಷ್ಟ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಕೂಡ ಇಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಜನತೆಗೆ ಅವರು ಇರುವ ಜಾಗದಲ್ಲಿಯೇ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ದೊರಕಿಸಿ ಕೊಡುವುದು ನಮ್ಮ ಗುರಿ ಎಂದರು.
ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ರೋಹನ್ ಎಂ.ದೀಕ್ಷಿತ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಇ.ಎನ್.ಟಿ ಸಂಬಂಧಿಸಿದ ಎಲ್ಲ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೂಡಾ ಇಲ್ಲಿ ನಡೆಸಲಾಗಿದೆ ಎಂದರು.
ಶಿಬಿರದಲ್ಲಿ ಉಚಿತ ಹಿಯರಿಂಗ್ ಟೆಸ್ಟ್, ಮಕ್ಕಳು ಮತ್ತು ವಯಸ್ಕರಲ್ಲಿ ಮೂಗಿನ ದ್ರವದ ತಪಾಸಣೆ, ಅಲರ್ಜಿಗೆ ಚಿಕಿತ್ಸೆ, ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ, ವೆರ‌್ಟಿಗೋ ಪರೀಕ್ಷೆ ಮತ್ತು ಚಿಕಿತ್ಸೆ, ಧ್ವನಿ ಬದಲಾವಣೆಗಳ ಪರೀಕ್ಷೆ ಮತ್ತು ಚಿಕಿತ್ಸೆ, ಕಿವುಡುತನದ ಪರೀಕ್ಷೆ ಮತ್ತು ಚಿಕಿತ್ಸೆ, ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ, ಕಿವಿ-ಮೂಗು- ಗಂಟಲು ಕ್ಯಾನ್ಸರ್ ತಪಾಸಣೆ, ಗೊರಕೆಗೆ ಚಿಕಿತ್ಸೆ ಇತ್ಯಾದಿ ಉಚಿತ ತಪಾಸಣೆ ಸೇವೆ ನೀಡಲಾಯಿತು. 143 ಮಂದಿ ಶಿಬಿರದಲ್ಲಿ ಭಾಗವಹಿಸಿದರು.