ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ ಮರು ಪಾವತಿಗೆ ಆಗ್ರಹಿಸಿ ಧರಣಿ

udp-12-koraga protest 1
Published on

ಉಡುಪಿ: ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಮರು ಪಾವತಿ ರದ್ದು ಮಾಡಿದ ಆದೇಶವನ್ನು ರಾಜ್ಯ ಸರ್ಕಾರ ಪುನರ್‌ಪರಿಶೀಲಿಸಿ, ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊರಗರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಕೊರಗ ಸಮುದಾಯದಲ್ಲಿ ಕುಡಿತದ ಚಟ ಹೆಚ್ಚಿದೆ ಎಂಬ ಕಾರಣ ನೀಡಿ ವೈದ್ಯಕೀಯ ವೆಚ್ಚ ಮರುಪಾವತಿ ವ್ಯವಸ್ಥೆ ತಡೆ ಹಿಡಿಯಲಾಗಿದೆ. ಜಿಲ್ಲಾಡಳಿತ ಸಲ್ಲಿಸಿರುವ ವರದಿ ಅಪ್ರಸ್ತುತ. ಸಂವಿಧಾನ ನೀಡಿರುವ ಹಕ್ಕನ್ನು ಕಸಿದುಕೊಳ್ಳುವ ಷಡ್ಯಂತರ ವಿರುದ್ಧ ಹೋರಾಟ ಅಗತ್ಯ. ಜಿಲ್ಲೆಯಲ್ಲಿ ಕೊರಗ ಜನಾಂಗ ಆರ್ಥಿಕವಾಗಿ ತೀರ ದುರ್ಬಲವಾಗಿದ್ದು, ಸಮುದಾಯ ಜನಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ರಕ್ತಹೀನತೆ, ಅಪೌಷ್ಟಿಕತೆ, ಟಿ.ಬಿ. ಕ್ಯಾನ್ಸರ್ ಮೊದಲಾದ ಮಾರಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ನಾಡ, ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಕಾರ್ಯದರ್ಶಿ ಪುತ್ರನ್, ಸದಸ್ಯರಾದ ಸುನಂದಾ, ದಿವಾಕರ್, ಕೊರಗ ಮುಖಂಡರಾದ ಗಣೇಶ್ ಕೊರಗ, ಗೌರಿ, ಬಾಬು ಪಾಂಗಾಳ, ಗಣೇಶ್ ಬಾರಕೂರು, ಶ್ರೀಧರ ನಾಡ, ಲಕ್ಷ್ಮಣ ಬೈಂದೂರು ಉಪಸ್ಥಿತರಿದ್ದರು.

ಪ್ರತಿಭಟನೆಗೂ ಮುನ್ನ ಉಡುಪಿ ಟೈಗಲ್ ಸರ್ಕಲ್‌ನಿಂದ ಸಿಂಡಿಕೆಟ್ ಸರ್ಕಲ್ ಮೂಲಕ ಡಿಸಿ ಕಚೇರಿವರೆಗೆ ಜಾಥಾ ನಡೆಯಿತು. ಪ್ರತಿಭಟನಾ ಸಭೆಯ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net