

ಎನ್.ಮುನಿವೆಂಕಟೇಗೌಡ ಕೋಲಾರ; ಬಡವರ ಪಾಲಿನ ದೇವಾಲಯವಾಗಬೇಕಿದ್ದ ಸರ್ಕಾರಿ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ ಮಧ್ಯವರ್ತಿಗಳ ಹಾವಳಿಯಿಂದ ಶ್ರೀಮಂತರ ಪಾಲಿಗೆ ವರವಾದರೆ, ಬಡವರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ, ದುಬಾರಿ ವೆಚ್ಚ ಭರಿಸಿ ಖಾಸಗಿ ಆಸ್ಪತ್ರೆಗೂ ಹೋಗಲಾರದ ಸ್ಥಿತಿ ನಿರ್ಮಾಣ ಮಾಡಿದೆ.
ಕೆಲ ಸಂಘಟನೆಗಳ ಮುಖಂಡರು ಮತ್ತು ಅದೇ ಆಸ್ಪತ್ರೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿರುವ ನೌಕರರು ಜಿಲ್ಲಾಸ್ಪತ್ರೆಯಲ್ಲಿ ದಲ್ಲಾಳಿಗಳಾಗಿದ್ದು, ರೋಗಿಗಳಿಂದ ಚಿಕಿತ್ಸೆ ನೆಪದಲ್ಲಿ ಸಾವಿರಾರು ರೂಪಾಯಿ ಕೀಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಂಘಟನೆಗಳ ಹೆಸರಿನಲ್ಲಿ ಆಗಾಗ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯ ವಿರುದ್ಧ ಪತ್ರಿಕಾ ಹೇಳಿಕೆ ನೀಡುವುದು, ಕೆಲವರನ್ನು ಕರೆದುಕೊಂಡು ಬಂದು ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸುವುದು ಇತ್ಯಾದಿ ಮಾಡುತ್ತಾರೆ. ಅಂತಹ ಸಂಘಟನೆಗಳವರು ನಮ್ಮ ಕೆಲಸಗಳನ್ನು ಬೇಗ ಮಾಡಿಕೊಡಬೇಕು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಬೆದರಿಸಿ ಬೇಕಾದ ರೋಗಿಗಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರಿಗೆ ಮತ್ತು ಸಿಬ್ಬಂದಿಗೆ ತಿಳಿಯದೇ ರೋಗಿಗಳ ಬಳಿ ಹಣ ಕೀಳುವ ಪ್ರವೃತ್ತಿ ಅವ್ಯಾಹತವಾಗಿದೆ. ಈ ಅಕ್ರಮದಲ್ಲಿ ಕೆಲ ನಕಲಿ ಪತ್ರಕರ್ತರೂ ಕೈಜೋಡಿಸಿದ್ದಾರೆ ಎಂಬ ಆರೋಪವಿದೆ.
ವೈದ್ಯರಿಗೆ ಕಳಂಕ!
ಈಗಾಗಲೇ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲ ರೋಗಿಗಳಿಗೂ ಚಿಕಿತ್ಸೆ ಕೊಡುವ ಒತ್ತಡದಲ್ಲಿರುವ ವೈದ್ಯರಿಗೆ ನಿತ್ಯ ದಲ್ಲಾಳಿಗಳು ಒತ್ತಡ ಹಾಕುವುದು ಮತ್ತು ಮಧ್ಯವರ್ತಿಗಳು ಕರೆತಂದಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದರೂ ವೈದ್ಯರಿಗೆ ಹಣ ನೀಡಬೇಕು ಎಂದು ರೋಗಿಗಳ ಬಳಿ ಹಣ ಪಡೆಯುತ್ತಿರುವುದರಿಂದ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಕಳಂಕ ಬರುತ್ತಿದೆ ಎಂದು ವೈದ್ಯರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಹೆಚ್ಚು ರೋಗಿಗಳು ಬರುವ ಕಾರಣ ರೋಗಿಯ ಪರಿಸ್ಥಿತಿ ಅರಿತು ಶಸ್ತ್ರ ಚಿಕಿತ್ಸೆಯ ದಿನಾಂಕ ನಿಗದಿಪಡಿಸುತ್ತೇವೆ. ಪರಿಸ್ಥಿತಿ ಗಂಭೀರವಾಗಿರುವ ರೋಗಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಪರಿಸ್ಥಿತಿ ಸ್ವಲ್ಪ ಸುಧಾರಣೆಯಿರುವ ರೋಗಿಗೆ ನಂತರ ಚಿಕಿತ್ಸೆ ಮಾಡಲಾಗುವುದು. ಆದರೆ, ** ಪತ್ರಕರ್ತರು ಮತ್ತು ಸಂಘಟನೆಗಳ ಹೆಸರಿನಲ್ಲಿ ಬರುವ ವ್ಯಕ್ತಿಗಳು ರೋಗಿಯನ್ನು ಕರೆದುಕೊಂಡು ಬಂದು ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಒತ್ತಡ ಹಾಕುತ್ತಾರೆ. ನಾವು ಆ ರೋಗಿಯ ಪರಿಸ್ಥಿತಿ ಸುಧಾರಣೆಯಲ್ಲಿದೆ ನಂತರ ಮಾಡಲಾಗುವುದು, ಮೊದಲಿಗೆ ಪರಿಸ್ಥಿತಿ ಗಂಭೀರವಾಗಿರುವ ರೋಗಿಯ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಹೇಳಿ ವಾಪಸ್ಸು ಕಳುಹಿಸಿದರೆ ಆಸ್ಪತ್ರೆಯ ಒಟಿ ಸಿಬ್ಬಂದಿಯ ಮೇಲೆ ಸುಳ್ಳು ಅಪಪ್ರಚಾರ ಮಾಡುತ್ತಾರೆ. ಇದರಿಂದ ಮನನೊಂದು ಒತ್ತಡದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೂ ದೂರು ನೀಡಲಾಗಿದೆ.
- ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆ ಸಿಬ್ಬಂದಿ
ವೈದ್ಯರಿಗೆ ಎಲ್ಲ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ಮನಸ್ಸಿದ್ದರೂ ಮಧ್ಯವರ್ತಿಗಳ ಹಾವಳಿಯಿಂದ ಹಣವಂತರು ಮಧ್ಯವರ್ತಿಗಳ ಮೂಲಕ ನೇರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಪೊಲೀಸರು ಕ್ರಮವಹಿಸಿ, ಮಧ್ಯವರ್ತಿಗಳನ್ನು ಓಡಿಸಬೇಕು. ಈ ಮೊದಲು ದೇವರಾಜ್ ಅವರು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಎಸ್.ಎನ್.ಆರ್ ಆಸ್ಪತ್ರೆಯ ಮೇಲೆ ದಾಳಿ ಮಾಡಿ ಮಧ್ಯವರ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದರು. ಅವರು ಹೋದ ನಂತರ ಮತ್ತೆ ದಂಧೆ ಶುರುವಾಗಿದೆ. ಈಗಿರುವ ಎಸ್ಪಿ ಕ್ರಮವಹಿಸಿ ಎಲ್ಲ ರೋಗಿಗಳಿಗೂ ಸಮಾನ ಚಿಕಿತ್ಸೆ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಒತ್ತಡದಿಂದ ವಿಮುಕ್ತಿಗೊಳಿಸಬೇಕಿದೆ.
> ಮುನಿವೆಂಕಟೇಶ್
ಹಿರಿಯ ನಾಗರಿಕ, ಕೋಲಾರ