ಜಾಗೃತ ಸಮಾಜಕ್ಕೆ ಮಾಧ್ಯಮ ಅಡಿಪಾಯ

CLK KARYAGARA SUDDIGE PHOTO
Published on

ಚಳ್ಳಕೆರೆ: ಆಡಳಿತ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯಗಳು ಸಂವಿಧಾನ ಬದ್ಧವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಡಿನಾಡು ಪತ್ರಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಚಂದ್ರಯಾನ ತಲುಪುವ ರೀತಿಯಲ್ಲಿ ಆಧುನಿಕತೆ ಬೆಳೆಯುತ್ತಿರುವ ಸಮಾಜದಲ್ಲಿ ಮೌಲ್ಯ ಮತ್ತು ಸಂವಿಧಾನದ ಆಶಯಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಕರ್ತವ್ಯಗಳು ಪಾರದರ್ಶಕವಾಗಿ ನಡೆಯಬೇಕು ಎಂದರು.

ಸರ್ವರ ಹಿತ ಕಾಪಾಡುವ ರೀತಿಯಲ್ಲಿ ಆಡಳಿತ ವ್ಯವಸ್ಥೆ ಇರಬೇಕು. ಸಮರ್ಪಕ ಆಡಳಿತ ವ್ಯವಸ್ಥೆ ಜನಪರ ಇರುವಂತೆ ಜಾಗೃತಿಗೊಳಿಸುವ ಕೆಲಸದಲ್ಲಿ ಪತ್ರಿಕಾ ರಂಗ ಕಾರ್ಯನಿರ್ವಹಿಸಬೇಕು. ವಾಸ್ತವ, ಸತ್ಯದ ಆಧಾರದಲ್ಲಿ ವರದಿಗಾರಿಕೆ ಮಾಡುವ ಕೆಲ ಪತ್ರಕರ್ತರಿಗೆ ಅಪಾಯ ಎದುರಾಗುತ್ತದೆ ಎಂದು ಹೇಳಿದರು.

ಬದುಕಿನ ಭದ್ರತೆ ಇಲ್ಲದ ಪತ್ರಕರ್ತರಿಗೆ ಬಸ್‌ಪಾಸ್, ನಿವೇಶನ ಕೊಡಿಸುವ ಪ್ರಯತ್ನ ಸರ್ಕಾರದ ಹಂತದಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಅಧ್ಯಕ್ಷ ಕೆ.ಶಿವಕುಮಾರ್ ಮಾತನಾಡಿ, ಸರ್ಕಾರ ಹಂತದಲ್ಲಿ ಬಸ್ ಪಾಸ್, ಪತ್ರಕರ್ತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸೇರಿ ವಿಮಾ ಸೌಲಭ್ಯಗಳು ಜಾರಿ ಮಾಡುವಂತೆ ಸರ್ಕಾರದ ಹಂತದಲ್ಲಿ ಜನಪ್ರತಿನಿಧಿಗಳು ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಈಶ್ವರ‌್ಪಪ್ಪ, ಜಿಲ್ಲಾಧ್ಯಕ್ಷ ಅನಂತಮೂರ್ತಿ ನಾಯಕ್, ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ, ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ. ತಿಪ್ಪೇಸ್ವಾಮಿ, ಎಂ.ಎನ್.ಮೃತ್ಯುಂಜಯ, ಎಸ್.ವಿಷ್ಣುಮೂರ್ತಿ ರಾವ್, ಪಿ.ಎಚ್.ಜಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net