ಮಾಧ್ಯಮರಂಗ ಕೂಡ ಕರೊನಾ ವಾರಿಯರ್ಸ್‌ : ಮಹಿಳಾ ಬಳಗದ ಸದಸ್ಯೆ ಡಾ.ಸುವರ್ಣಾ ಬಣ್ಣನೆ

140420 Devadurga Yuvabrigade Food Distribute
Published on

ದೇವದುರ್ಗ: ಮಹಾಮಾರಿ ಕರೊನಾ ವೈರಸ್ ತಡೆಗೆ ಶ್ರಮಿಸುತ್ತಿರುವ ವೈದ್ಯರು, ಪೊಲೀಸರು, ಅಧಿಕಾರಿಗಳಂತೆ ಮಧ್ಯಮರಂಗ ಕೂಡ ಸಕ್ರಿಯವಾಗಿದೆ. ವೈರಸ್ ತಡೆಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಕರೊನಾ ವಾರಿಯರ್ಸ್‌ ಸಾಲಿಗೆ ಇವರೂ ಸೇರಿದ್ದಾರೆ ಎಂದು ದೇವದುರ್ಗ ಮಹಿಳಾ ಬಳಗದ ಸದಸ್ಯೆ ಡಾ.ನಿರ್ಮಲಾ ಬಣ್ಣಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ದಿನಪತ್ರಿಕೆ ವಿತರಕರಿಗೆ ದೇವದುರ್ಗ ಮಹಿಳಾ ಬಳಗ ಹಾಗೂ ಯುವಾ ಬ್ರಿಗೇಡ್ ಸಂಘಟನೆಯಿಂದ ಆಹಾರಧಾನ್ಯ ವಿತರಿಸಿ ಮಂಗಳವಾರ ಮಾತನಾಡಿದರು. ವೈರಸ್ ತಡೆಗೆ ಮಾಧ್ಯಮರಂಗ ಕೂಡ ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿದೆ. ಇವರ ಶ್ರಮ ನಾವು ಕಡೆಗಣಿಸಬಾರದು. ವರದಿಗಾರರು ಕೂಡ ಕರ್ತವ್ಯದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.

ಪ್ರಾಧ್ಯಾಪಕಿ ಡಾ.ಸುಮಂಗಲಾ ಮಾತನಾಡಿ, ನಾವು ಬೆಳಗ್ಗೆ ಎದ್ದೇಳುವ ಮುನ್ನವೆ ನಮ್ಮ ಕೈಗೆ ಪತ್ರಿಕೆ ಬರುತ್ತವೆ. ಇದು ಪತ್ರಿಕೆ ಹಂಚುವವರ ಕಾಯಕ ಪ್ರಜ್ಞೆ ತೋರಿಸುತ್ತದೆ. ಇವರಲ್ಲಿ ಹಲವರು ಬಡವರಿದ್ದು, ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಪತ್ರಿಕೆ ವಿತರಕರು ಕರೊನಾ ಬಗ್ಗೆ ಜಾಗೃತಿವಹಿಸಬೇಕು. ಜೀವ, ಜೀವನ ಎರಡೂ ಮುಖ್ಯವಾಗಿದ್ದು, ಎರಡನ್ನೂ ಕಾಪಾಡಿಕೊಳ್ಳಬೇಕು ಎಂದರು.

ತಾಲೂಕಿನ 17 ಪತ್ರಿಕಾ ವಿತರಕರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿ ಅಗತ್ಯ ಆಹಾರಧಾನ್ಯ ವಿತರಿಸಲಾಯಿತು. ಹಿರಿಯ ಮಹಿಳಾ ಸದಸ್ಯೆ ವನಜಾಕ್ಷಮ್ಮ ವಾರದ್, ರೇಣುಕಾ, ಯುವಾ ಬ್ರಿಗೇಡ್‌ನ ಸುರೇಶ ವಕೀಲ, ಗಂಗನಗೌಡ, ಮಲ್ಲೇಶ ಮಾಶೆಟ್ಟಿ, ಸಿದ್ದು, ಆನಂದ ಗುಡಿ, ಬಂದೇನವಾಜ್ ಹಾಗೂ ಪತ್ರಿಕಾ ವಿತರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net