ನುಡಿಜಾತ್ರೆಯನ್ನು ಕುಟುಂಬದವರಂತೆ ಆಚರಿಸೋಣ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ

Media Coordination Committee Meeting Mandya
Published on

ಮಂಡ್ಯ: ನಗರದ ಹೊರವಲಯದಲ್ಲಿ ಡಿ.20, 21 ಮತ್ತು 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಕುಟುಂಬದವರೊಂದಿಗೆ ಹಬ್ಬ ಮಾಡುವಂತೆ ಜಿಲ್ಲೆಯ ಜನತೆ ಒಟ್ಟಾಗಿ ಆಚರಣೆ ಮಾಡಬೇಕು ಎಂದು ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದರು.

ನಗರದ ಹೊರವಲಯದ ಅಮರಾವತಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸಮ್ಮೇಳನದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನದ ಯಶಸ್ವಿಗೆ ಮಾಧ್ಯಮದ ಪಾತ್ರ ಬಹಳ ಮುಖ್ಯ. ವ್ಯಾಪಕ ಪ್ರಚಾರ ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಮಾಧ್ಯಮದವರು ಸಹಕರಿಸಬೇಕು ಎಂದರು.

ಇದು ಕನ್ನಡದ ಹಬ್ಬ, ನಮ್ಮ ಮನೆ ಹಬ್ಬ. ಕನ್ನಡದ ತೇರು ಎಳೆಯಲು ಎಲ್ಲರ ಸಹಕಾರ ಮುಖ್ಯ. ಮಾಧ್ಯಮದಲ್ಲಿ ಹೆಚ್ಚಿನ ಪ್ರಚಾರ ನೀಡಿ ಸಕ್ಕರೆಯ ನಾಡು ಅಕ್ಕರೆಯ ಘಮಲನ್ನು ಜಗಕ್ಕೆ ಪಸರಿಸುವಂತೆ ಮಾಡಬೇಕು. ಮಂಡ್ಯ ಆತಿಥ್ಯಕ್ಕೆ ಹೆಸರುವಾಸಿ. ರಾಜ್ಯ, ಹೊರರಾಜ್ಯದಿಂದ ಆಗಮಿಸುವ ಸಾಹಿತ್ಯಾಸಕ್ತರು, ಮಾಧ್ಯಮ ಮಿತ್ರರ ಆತಿಥ್ಯಕ್ಕೆ ಯಾವುದೇ ಕುಂದುಕೊರತೆ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್‌ಜಿಒಗಳಿಂದ ಸ್ವಯಂ ಸೇವಕರನ್ನು ನೇಮಿಸುಕೊಳ್ಳಬೇಕು. ನಮ್ಮನೆ ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸಬೇಕು. ಮಾಧ್ಯಮ ಸಂಸ್ಥೆಗಳಿಂದ ಸಮ್ಮೇಳನಕ್ಕೆ ಆಗಮಿಸುವವವರಿಗೆ ಸೂಕ್ತ ವಸತಿ ವ್ಯವಸ್ಥೆ, ವಾಹನ, ಊಟ, ತಿಂಡಿ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಾಹಿತ್ಯ ಸಮ್ಮೇಳನದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸುತ್ತಿರುವ ಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ. ಎಲ್ಲೆಡೆ ನಿರೀಕ್ಷೆಗೂ ಮೀರಿ ರಥವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಸಮ್ಮೇಳನದ ಪ್ರಚಾರಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ಪ್ರಚಾರದ ರೂವಾರಿಗಳು ಮಾಧ್ಯಮದವರೇ. ಜನರನ್ನು ತಲುಪಲು ಮಾಧ್ಯಮಗಳ ಸಹಕಾರ ಬಹಳ ಮುಖ್ಯ. ಸಮ್ಮೇಳನದ ಯಶಸ್ವಿಗೆ ಎಲ್ಲರ ಸಲಹೆಗಳನ್ನು ಪಡೆದುಕೊಂಡು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಮಾಧ್ಯಮ ಸಮನ್ವಯ ಸಮಿತಿ ಬಹಳ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ದಿನೇಶ್ ಗೂಳಿಗೌಡ ಅವರ ಕಾರ್ಯಕ್ಕೆ ಜಿಲ್ಲಾಡಳಿತ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ, ರಾಷ್ಟ್ರದ ನಾನಾ ಭಾಗಗಳಿಂದ ಬರುವವರಿಗೆ ಸಕಲ ವ್ಯವಸ್ಥೆ ಮಾಡಲಾಗುವುದು. ಊಟ, ಪುಸ್ತಕ ಮಳಿಗೆ, ವೇದಿಕೆ ಒಂದೇ ಕಡೆ ಇರುವಂತೆ ಜಾಗ ಗುರುತಿಸಲಾಗಿದೆ. ಎಲ್ಲ ಆಯಾಮದಲ್ಲಿ ಚರ್ಚಿಸಿ, ತಾಂತ್ರಿಕ ವರದಿ ಆಧರಿಸಿ ಜಾಗ ನಿಗದಿ ಮಾಡಲಾಗಿದೆ. ಮುಖ್ಯವಾಗಿ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net