

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಿ. 22 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಪಾಲ್ಗೊಳ್ಳುತ್ತಿರುವ ಓಟಗಾರರಿಗೆ ನೀಡಲಾಗುವ ಮೆಡಲ್ಗಳು ಮತ್ತು ಐತಿಹಾಸಿಕ ಗೋಳಗುಮ್ಮಟಕ್ಕೆ ಅಳವಡಿಸಲಾಗಿರುವ ಸೋಲಾರ್ ವಿದ್ಯುತ್ ದೀಪಾಲಂಕಾರ ಈ ಬಾರಿಯ ಓಟದ ಆಕರ್ಷಣೆಯ ಕೇಂದ್ರವಾಗಿವೆ.
ಜನಮನ ಸೆಳೆಯುತ್ತಿರುವ ಮೆಡಲ್ಗಳು : ಹೆರಿಟೇಜ್ ರನ್‌ಗೆ ಈಗಾಗಲೇ ಹೆಸರು ನೋಂದಾಯಿಸಿರುವ ಪ್ರತಿಯೊಬ್ಬ ಓಟಗಾರನಿಗೆ ಈ ಬಾರಿ ಪದಕಗಳನ್ನು ನೀಡಲಾಗುತ್ತಿದ್ದು, ಈ ಪದಕಗಳೂ ಆಕರ್ಷಿಸುತ್ತಿವೆ. ಮೆಡಲ್ನ ಒಂದು ಬದಿ ಪರಿಸರದಲ್ಲಿ ತಮ್ಮನ್ನು ಕಾಣಬೇಕು ಎಂದು ಹೇಳಿರುವ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರವಿದ್ದು, ಮತ್ತೊಂದು ಬದಿ ವೃಕ್ಷದ ಚಿತ್ರವಿದೆ. ಈ ಕಾರ್ಯಕ್ರಮದ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಲಾಗುತ್ತಿದೆ.
21 ಕಿಮೀ. ಓಟಗಾರರಿಗೆ ಚಿನ್ನದ ಬಣ್ಣದ ಮೆಡಲ್, 10 ಕಿಮೀ. ಓಟಗಾರರಿಗೆ ಕಂಚಿನ ಬಣ್ಣದ ಮೆಡಲ್ ಮತ್ತು 5 ಕಿಮೀ. ಓಟದಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಕಂದು ಬಣ್ಣದ ಮೆಡಲ್ ನೀಡಲಾಗುತ್ತಿದೆ ಎಂದು ಮೆಡಲ್ ಸಮಿತಿಯ ಡಾ. ಪ್ರವೀಣ ಚೌರ ಮತ್ತು ಸಮೀರ ಬಳಿಗಾರ ತಿಳಿಸಿದ್ದಾರೆ.
ಹೆರಿಟೇಜ್ ರನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುವ ಓಟಗಾರರಿಗೆ ಡಿ. 21 ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ಸಿಎಸ್‌ಆರ್ ಅನುದಾನದಡಿ ಐತಿಹಾಸಿಕ ಗೋಳಗುಮ್ಮಟಕ್ಕೆ ಸೋಲಾರ್ ವಿದ್ಯುತ್ ದೀಪಾಲಂಕಾರ ಅಳವಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಡಿ. 21 ರಂದು ಸಂಜೆ 6ಕ್ಕೆ ವಿದ್ಯುತ್ ದೀಪಾಲಂಕಾರ ಉದ್ಘಾಟಿಸಲಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.