* ವಿದ್ಯುತ್ ದರ ಯೂನಿಟ್‌ಗೆ 59 ಪೈಸೆ ಹೆಚ್ಚಳಕ್ಕೆ ಮೆಸ್ಕಾಂ ಮನವಿ -ಗ್ರಾಹಕರು ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಆಕ್ಷೇಪ

mng-12feb-mescom (1)
Published on




ಮಂಗಳೂರು : ಮೆಸ್ಕಾಂ ತನ್ನ ಕಂದಾಯ ಕೊರತೆ ನೀಗಿಸಲು ಪ್ರತೀ ಯೂನಿಟ್‌ಗೆ ಸರಾಸರಿ 59 ಪೈಸೆ ದರ ಏರಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಕೈಗಾರಿಕೆಗಾ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನಗರದ ಬಿಜೈಯ ಮೆಸ್ಕಾಂನ ಸಭಾಭವನದಲ್ಲಿ ಸೋಮವಾರ ಕೆಇಆರ್‌ಸಿಯಿಂದ ವಿದ್ಯುತ್ ದರ ಪರಿಷ್ಕರಣೆಯ ಕುರಿತು ಸಾರ್ವಜನಿಕ ವಿಚಾರಣೆ ನಡೆಯಿತು. ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ
ಭಾಗವಹಿಸಿದ್ದರೆ, ಸದಸ್ಯ ಎಂ.ಡಿ. ರವಿ ಸಭೆಯಲ್ಲಿ ಉಪಸ್ಥಿತರಿದ್ದು ಆಕ್ಷೇಪಣೆಗಳನ್ನು ಆಲಿಸಿದರು.
2024-25ನೆ ಸಾಲಿನಲ್ಲಿ 5281.94 ಕೋಟಿ ರೂ. ಬೇಡಿಕೆ ಇದ್ದು, 4929.98 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಿಂದ 351. 96 ಕೋಟಿ ರೂ. ಕಂದಾಯ ಕೊರತೆ ಉಂಟಾಗಲಿದೆ. ವಿದ್ಯುತ್ ಸರಬರಾಜು ವೆಚ್ಚ ಪ್ರತೀ ಯೂನಿಟ್‌ಗೆ 8.91 ರೂ. ಇದ್ದು, ಹಾಲಿ ದರಗಳಲ್ಲಿ ಸರಾಸರಿ ಆದಾಯ ಪ್ರತೀ ಯೂನಿಟ್‌ಗೆ 8.32 ರೂ. ಆಗಿದೆ. ಈ ಹಿನ್ನೆಲೆಯಲ್ಲಿ 59 ಪೈಸೆ ದರ ಏರಿಸಲು ಅನುಮತಿ ನೀಡಬೇಕೆಂದು ಮೆಸ್ಕಾಂ ಎಂಡಿ ಪದ್ಮಾವತಿ ಅವರು ಆಯೋಗಕ್ಕೆ ವಿವರ ನೀಡಿದರು.
* ಕೆಸಿಸಿಐ ವಿರೋಧ
ಎಂಎಸ್‌ಎಂಇಗಳು ಈಗಾಗಲೇ ಸಂಕಷ್ಟದಲ್ಲಿವೆ.ವಿದ್ಯುತ್ ದರ ಹೆಚ್ಚಳ ಮಾಡಿದರೆ ಇನ್ನಷ್ಟು ತೊಂದರೆ ಆಗಲಿದೆ . ಈಗ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಗುತ್ತಿಗೆ ಬೇಡಿಕೆಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚುವರಿ ವಿದ್ಯುತ್ ಬಳಕೆ ಮೇಲೆ ದಂಡ ಹಾಕುವುದನ್ನು ಕೈಬಿಡಬೇಕು ಎಂದು ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿಗಳು ಒತ್ತಾಯಿಸಿದರು. ಪ್ರೀಪೇಯ್ಡ ಮೀಟರ್ ಅಳವಡಿಕೆ ಜಾರಿಯಾಗಿಲ್ಲ ಎಂದು ದೂರಿದರು ಪ್ರೀಪೇಯ್ಡ ಮೀಟರ್ ಯಾರು ಕೇಳಿದರೂ ಅಳವಡಿಸಲು ಕ್ರಮ ವಹಿಸುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.
*ಬಾಕಿ ವಸೂಲಿ ಮಾಡಿ
ಮೆಸ್ಕಾಂ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ಜಾಸ್ತಿ ಆಗಿದೆ.ದರ ಏರಿಕೆ ಪ್ರಸ್ತಾವನೆಯಲ್ಲಿ ಅಗತ್ಯ ಕಾರಣ ಉಲ್ಲೇಖಿಸಿಲ್ಲ. ರೈತರ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಕ್ರಮ ಕೈಗೊಳ್ಲಬೇಕು. ಮೆಸ್ಕಾಂಗೆ ವಿವಿಧ ಕಂಪನಿಗಳಿಂದ 365 ಕೋಟಿ ರೂ.ಬಾಕಿ ಇರುವುದಾಗಿ ಲೆಕ್ಕ ನೀಡಿದ್ದಾರೆ. ಅದನ್ನು ವಸೂಲಿ ಮಾಡಿ .ದರ ಏರಿಕೆ ಮಾಡಿ ಹಣ ಸಂಗ್ರಹಿಸುವ ಅಗತ್ಯವಿಲ್ಲ ಎಂದು
ಭಾರತೀಯ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ ಹೇಳಿದರು.
* ಆಕ್ಷೇಪ ಸಲ್ಲಿಸಿದರೂ ದರ ಹೆಚ್ಚಳ
ದರ ಏರಿಕೆ ಪ್ರಸ್ತಾವದ ಬಗ್ಗೆ ಗ್ರಾಹಕರಿಂದ ಆಕ್ಷೇಪಣೆ ಸ್ವೀಕರಿಸಲಾಗುತ್ತದೆಯೇ ಹೊರತು ಗ್ರಾಹಕರ ಪರವಾಗಿ ಇದುವರೆಗೆ ಆಯೋಗದಿಂದ ತೀರ್ಪು ಬಂದಿಲ್ಲ ಎಂದು ಜಿ.ಕೆ. ಭಟ್ ಹೇಳಿದರು. ದ.ಕ., ಉಡುಪಿಯ ಗ್ರಾಹಕರು ವಿದ್ಯುತ್ ಬಿಲ್ ಸಕಾಲದಲ್ಲಿ ಪಾವತಿಸುತ್ತಿದ್ದಾರೆ.
ಸೋರಿಕೆ ಕೂಡಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ದರ ಹೆಚ್ಚಳದಿಂದ ವಿನಾಯಿತಿ ನೀಡುವಂತೆ ಅವರು ಒತ್ತಾಯಿಸಿದರು.
ಮೀನುಗಾರಿಕೆಯನ್ನೇ ಅವಲಂಬಿಸಿರುವ ಮಂಜುಗಡ್ಡೆ ಸ್ಥಾವರಗಳ ವತಿಯಿಂದ ಪ್ರತೀ ಬಾರಿ ವಿದ್ಯುತ್ ದರ ಏರಿಕೆ ಮಾಡದಂತೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಆದರೆ ಆಯೋಗ ಮಾತ್ರ ಪ್ರತಿ ಬಾರಿ ದರ ಹೆಚ್ಚಳದ ಮನವಿಯನ್ನು ಪುರಸ್ಕರಿಸುತ್ತಿದೆ. 5 ಅಥವಾ 10 ಪೈಸೆ ಹೆಚ್ಚಳದಿಂದಲೂ ಮಂಜುಗಡ್ಡೆ ಸ್ಥಾವರಗಳಿಗೆ ಭಾರೀ ದೊಡ್ಡ ಹೊಡೆತ ಬೀಳುತ್ತದೆ ಎಂದು ಮಂಜುಗಡ್ಡೆ ಸ್ಥಾವರಗಳ ಪರವಾಗಿ ರಾಜೇಂದ್ರ ಸುವರ್ಣ ಸಮಸ್ಯೆ ವಿವರಿಸಿದರು.
* ಸ್ಲಾೃಬ್ ಪ್ರಕಾರ ದರ ನಿಗದಿಯಾಗಲಿ
ಈ ಹಿಂದಿನಂತೆ ಸ್ಲಾೃಬ್ ಆಧಾರದಲ್ಲಿ ವಿದ್ಯುತ್ ದರ ಮುಂದುವರಿಸಬೇಕು. ಇಲ್ಲವಾದರೆ ಗ್ಯಾರಂಟಿ ಯೋಜನೆ ಇಲ್ಲದ ಗೃಹ ಬಳಕೆಯ ವಿದ್ಯುತ್ ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿ ಹನುಮಂತ ಕಾಮತ್ ಮನವಿ ಮಾಡಿದರು.
ಈಗ ಗೃಹ ಬಳಕೆಯ ಗ್ರಾಹಕರಿಗೆ 200 ಯೂನಿಟ್‌ವರೆಗೂ ವಿದ್ಯುತ್ ಉಚಿತವಾಗಿ ಸಿಗುತ್ತಿದೆಯಲ್ಲಾ ಎಂದು ಆಯೋಗದ ಅಧ್ಯಕ್ಷರು ಪ್ರಶ್ನಿಸಿದಾಗ, ನಾವು ಅರ್ಜಿ ಹಾಕಿದರೂ ಪರಿಗಣಿಸಿಲ್ಲ. 4-5ತಿಂಗಳ ಸರಾಸರಿ ಲೆಕ್ಕಾಚಾರದಲ್ಲಿ ಈ ಯೋಜನೆ ಬಹಳಷ್ಟು ಗ್ರಾಹಕರಿಗೆ ಅನ್ವಯವಾಗುತ್ತಿಲ ಎಂದು ಹನುಮಂತ ಕಾಮತ್ ಪ್ರತಿಕ್ರಿಯಿಸಿದರು.
ಸಾಗರದ ವೆಂಕಟಗಿರಿ ಮಾತನಾಡಿ, ಅನೇಕ ಭಾಗಗಳಲ್ಲಿ ಅನಧಿಕೃತವಾಗಿ ಐಪಿ ಸೆಟ್ ಅಳವಡಿಸಲಾಗಿದ್ದರೂ ಮೆಸ್ಕಾಂ ಯಾವುದೇ ಕ್ರಮ ವಹಿಸಿಲ್ಲ. ಐಪಿ ಸೆಟ್‌ಗಳ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net