

ಶ್ರೀಧರ ಅಡಿ ಗೋಕರ್ಣ
90ರ ದಶಕದಿಂದೀಚೆಗೆ ದೇಶದಲ್ಲಿ ಏರುಗತಿಯಲ್ಲಿ ಬೆಳೆಯುತ್ತ ಸಾಗಿದ ಆಧುನಿಕ ಪ್ರವಾಸೋದ್ಯಮ ಗೋಕರ್ಣಕ್ಕೆ ಯಾತ್ರಾರ್ಥಿಗಳನ್ನು ಹೊರತಾದ, ಬೀಚ್ ಕೇಂದ್ರಿತ ಪ್ರತ್ಯೇಕ ಪ್ರವಾಸಿಗರ ದೊಡ್ಡ ಪ್ರಮಾಣದ ಆಗಮನಕ್ಕೆ ಕಾರಣವಾಗಿದೆ.
ಪ್ರತಿನಿತ್ಯ 10 ಸಾವಿರದಷ್ಟು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ವಾರಾಂತ್ಯದ ಮೂರು ದಿನ ಈ ಪ್ರಮಾಣ ಎರಡು ಪಟ್ಟು ಹೆಚ್ಚಾಗುತ್ತದೆ.
ಪ್ರವಾಸಿಗರಿಂದ ಗೋಕರ್ಣದ ಆರ್ಥಿಕತೆ ಭರಪೂರ ವೃದ್ಧಿಸಿತು. ಬಗೆ ಬಗೆಯ ನೂರಾರು ಹೋಟೆಲ್, ರೆಸ್ಟೋರಂಟ್, ಲಾಜಿಂಗ್ ಮತ್ತು ರೆಸಾರ್ಟ್‌ಗಳು ನಿರ್ಮಾಣಗೊಂಡವು. ಇದರ ಸಂಗಡ ಪ್ರವಾಸಿಗರಿಂದಾಗಿ ವಿವಿಧ ಬಗೆಯ ತ್ಯಾಜ್ಯ ಪ್ರಮಾಣವೂ ಅನಿಯಂತ್ರಿತವಾಗಿ ಹೆಚ್ಚಾಗುವಂತಾಗಿದೆ.
ಅಂದಾಜಿನ ಪ್ರಕಾರ 1 ಟನ್ನಿಗೂ ಅಧಿಕ ವಿವಿಧ ಪ್ರಕಾರದ ಘನತ್ಯಾಜ್ಯ ಗೋಕರ್ಣದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಶೇಖರಗೊಳ್ಳುತ್ತಿದೆ.
ಆದರೆ, ಇವತ್ತಿಗೂ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೋಕರ್ಣದಲ್ಲಿ ತ್ಯಾಜ್ಯಗಳನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಆರ್ಥಿಕ ಮೂಲವಿಲ್ಲ. ಏಳೆಂಟು ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿವಿಧ ಬೀಚ್ ಮತ್ತು ನಗರ ಪ್ರದೇಶದಲ್ಲಿನ ಘನ ಮತ್ತು ಹಸಿ ಕಸಗಳನ್ನು ಪೂರ್ಣವಾಗಿ ತೆಗೆಯಲು ಆಗದೇ ಪಂಚಾಯಿತಿ ವ್ಯವಸ್ಥೆ ಏದುಸಿರು ಬಿಡುವಂತಾಗಿದೆ.
ಸ್ಥಳೀಯ ಪಂಚಾಯಿತಿಯ ಎರಡು ವಾಹನಗಳು ನಿತ್ಯ 750 ಕಿಲೋದಿಂದ ಒಂದು ಟನ್ ಘನತ್ಯಾಜ್ಯವನ್ನು ಸಂಗ್ರಹಿಸುತ್ತವೆ. ವಾರಾಂತ್ಯದಲ್ಲಿ ಇದು ಹೆಚ್ಚಾಗುತ್ತದೆ. ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನಿರ್ವಹಿಸುವ ಸಲುವಾಗಿ ಪಂಚಾಯಿತಿ ಆವಾರದಲ್ಲಿ ಸದ್ಯ ಒಂದು ಸಣ್ಣ ಪ್ರಮಾಣದ ಘಟಕ ಕಳೆದ ನಾಲ್ಕು ವರ್ಷದಿಂದ ಕಾರ್ಯ ನಿರ್ವಹಿಸುತ್ತ ಬಂದಿದೆ.
ಇಲ್ಲಿ ಕಸವನ್ನು ವಿಂಗಡಿಸುವ 7 ಕಾರ್ಮಿಕರು ಮತ್ತು 3 ಚಾಲಕರು ಸೇವೆಯಲ್ಲಿದ್ದಾರೆ. ಆದರೆ ಕಸದ ವಿಂಗಡನೆ ಕೈಗಳಿಂದ ಆಗಬೇಕಾಗುವುದರಿಂದ ನಿತ್ಯ 500 ಕೆಜಿ ಮಾತ್ರ ಸಂಸ್ಕರಿಸಲ್ಪಡುತ್ತಿದೆ. ಸಂಸ್ಕರಿಸಲಾಗದ ಹೆಚ್ಚುವರಿ ಕಸಗಳು ಇಲ್ಲಿನ ಮುಖ್ಯ ಸಮಸ್ಯೆಯಾಗಿದೆ. ಇದರ ಸಂಗಡ ನಿತ್ಯ ಸಂಗ್ರಹಿಸಲಾಗುತ್ತಿರುವ ಮರುಬಳಕೆಗೆ (ರಿಸೈಕಲ್) ಯೋಗ್ಯವಲ್ಲದ 250 ಕೆಜಿಗೂ ಅಧಿಕ ಕಸವನ್ನು ನಿರ್ವಹಿಸುವುದೇ ದೊಡ್ಡ ಸವಾಲಾಗಿದೆ.
ಇಷ್ಟಾಗಿಯೂ ಈ ಘನತ್ಯಾಜ್ಯ ಘಟಕದಿಂದ ಮಾಸಿಕ 70ರಿಂದ 80 ಸಾವಿರ ರೂ. ಆದಾಯ ಬರುತ್ತಿದ್ದು ದೊಡ್ಡ ಆದಾಯ ಇಲ್ಲದೆ ಹೋದರೂ ಖರ್ಚಿನ ನಿರ್ವಹಣೆ ಆಗುತ್ತಿರುವುದು ವಿಶೇಷ.
ಗೋಕರ್ಣದ ಮಿತಿಮೀರಿದ ತ್ಯಾಜ್ಯದ ಭಾರವನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದ ಫಲವಾಗಿ ಗೋಕರ್ಣ ಪಂಚಾಯಿತಿಯಲ್ಲಿ ಸಂಪೂರ್ಣ ಯಾಂತ್ರೀಕೃತವಾಗಿ ಕಾರ್ಯ ನಿರ್ವಹಿಸುವ ಜಿಲ್ಲೆಯ ಮೊದಲ ಘನತ್ಯಾಜ್ಯ ಘಟಕ ಸ್ಥಾಪನೆಗೆ ಮೊದಲ ಹಂತದ ಸಿದ್ಧತೆ ಈಗಾಗಲೇ ಮುಗಿದಿದೆ.
ಇದಕ್ಕಾಗಿ ಈಗಾಗಲೇ ಜಿಪಂ ಸಿಇಒ ಈಶ್ವರ ಕಾಂದೂ ಖುದ್ದಾಗಿ ಬಂದು ಪ್ರತ್ಯೇಕವಾದ ಸ್ಥಳ ಪರಿಶೀಲನೆ ಮಾಡಿ ಮುಂದಿನ ಪ್ರಸ್ತಾವನೆಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ದಕ್ಷಿಣ ಕನ್ನಡದ ನಿಟ್ಟೆಯ ನಂತರ ರಾಜ್ಯದ ಎರಡನೆಯ ಹಾಗೂ ಉತ್ತರ ಕನ್ನಡದ ಮೊದಲ ಯಾಂತ್ರೀಕೃತ ತ್ಯಾಜ್ಯ ನಿರ್ವಹಣಾ ಘಟಕ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋಕರ್ಣದಲ್ಲಿ ನಿರ್ಮಾಣವಾಗಲಿದೆ.
ಇದಕ್ಕಾಗಿ ಜಿಪಂ ಒಂದೂವರೆ ಕೋಟಿ ರೂ. ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಒಂದು ಎಕರೆ ಜಾಗದಲ್ಲಿ ಸ್ಥಾಪಿತವಾಗಲಿರುವ ಈ ಘಟಕ ನಿತ್ಯ ಎರಡು ಟನ್ ಕಸವನ್ನು ವಿಂಗಡಿಸಿ ಸ್ವಚ್ಛಗೊಳಿಸಬಲ್ಲ ಸಾಮರ್ಥ್ಯ ಹೊಂದಿರಲಿದೆ.
80ರ ದಶಕದವರೆಗೂ ನಗರ ಸಭೆಯಾಗಿದ್ದ ಗೋಕರ್ಣ ಆನಂತರ ಗ್ರಾಮ ಪಂಚಾಯಿತಿಯಾಗಿ ಕೆಳದರ್ಜೆಗೆ ಬಂದಿತು. ಆದರೆ ಒಂದು ನಗರ ಸಭೆಗೂ ಹೆಚ್ಚಿನ ಕಾರ್ಯಭಾರ ಮತ್ತು ಕ್ಷೇತ್ರ ವ್ಯಾಪ್ತಿ ಮಾತ್ರ ಮೊದಲಿನಂತೆಯೇ ಉಳಿದು ಕಾರ್ಯಕ್ಷಮತೆಯಲ್ಲಿ ಹಿಂದಿರುವಂತಾಯಿತು. ಇಲ್ಲಿನ ವಿವಿಧ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗಾಗಿ ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಆಗ್ರಹ ಮೂರು ದಶಕಗಳಿಂದ ಕೇಳಿ ಬರುತ್ತಿದ್ದರೂ ಈ ತನಕ ಬಂದ ಯಾವ ಸರ್ಕಾರವೂ ಈ ಬಗ್ಗೆ ವಿಶೇಷ ಆಸಕ್ತಿ ತೋರದೆ ಇರುವುದು ತ್ಯಾಜ್ಯ ನಿರ್ವಹಣೆ ಒಳಗೊಂಡಂತೆ ನಾನಾ ಅಭಿವೃದ್ಧಿಯ ಕೊರತೆಗೆ ಮುಖ್ಯ ಹಿನ್ನೆಲೆ ಎನ್ನುವುದು ಪ್ರಾಜ್ಞರ ಅಭಿಪ್ರಾಯವಾಗಿದೆ.
ಗೋಕರ್ಣಕ್ಕೆ ಬರುವ ಯಾತ್ರಿಕರು ಮತ್ತು ಪ್ರವಾಸಿಗರ ಕಾರಣದಿಂದ ಇಲ್ಲಿ ಜಿಲ್ಲೆಯ ಪ್ರಥಮ ಪೂರ್ಣ ಪ್ರಮಾಣದ ಯಾಂತ್ರೀಕೃತ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಜಿಪಂ ವಿಶೇಷ ಸಿದ್ಧತೆ ನಡೆಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಘಟಕದ ಉಪಯೋಗವನ್ನು ಗೋಕರ್ಣ ಪಂಚಾಯಿತಿ ಮಾತ್ರವಲ್ಲದೆ ತಾಲೂಕಿನ ಹತ್ತಿರದ ಎಲ್ಲ ಪಂಚಾಯತಿಗಳೂ ಪಡೆಯುವ ಮೂಲಕ ಉತ್ತರ ಕನ್ನಡದಲ್ಲಿ ಸ್ವಚ್ಛತೆಯಲ್ಲಿ ಹೊಸ ಸಾಧನೆ ಮಾಡುವ ಎಲ್ಲ ಸಾಧ್ಯತೆಗಳಿವೆ.ಈಶ್ವರ ಕಾಂದೂ, ಜಿಪಂ ಸಿಇಒ ಉತ್ತರಕನ್ನಡ