

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರಸ್ತುತ ಭತ್ತದ ಗದ್ದೆಯ ಜಾಗದಲ್ಲಿ ಅಡಕೆ ಹಾಗೂ ರಬ್ಬರ್ ಕೃಷಿಯನ್ನು ರೈತರು ಮಾಡುತ್ತಿದ್ದು ಇದು ಆತಂಕಕಾರಿ ಎಂದು ಪ್ರಗತಿಪರ ಕೃಷಿಕ ಸುಲೇಮಾನ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ವಲಯದ ಗುರಿಪಳ್ಳದಲ್ಲಿ ಪಕೀರ ಎಂಬುವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತನಾಟಿ ನೆರವೇರಿಸಿ ಮಾತನಾಡಿದರು. ಭತ್ತದ ಗದ್ದೆಯನ್ನು ಉಳಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಪ್ರಯೋಜನಕಾರಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾತನಾಡಿ, ಯಾಂತ್ರಿಕೃತ ಭತ್ತ ಬೇಸಾಯದ ಸಸಿಮಡಿ ತಯಾರಿ, ಯಂತ್ರ ನಾಟಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಮಾಜಿ ಅಧ್ಯಕ್ಷೆ ಬೇಬಿ ಉಮೇಶ್, ಗುರಿಪಳ್ಳದ ಪ್ರಗತಿ ಬಂದು ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ ಅನಿತಾ, ಪ್ರಗತಿಪರ ಕೃಷಿಕರಾದ ಪಕೀರ, ಬಾಲಕೃಷ್ಣ ಗೌಡ, ಶ್ರೀನಿವಾಸ ಗೌಡ, ಸೇವಾಪ್ರತಿನಿಧಿ ಸುಮತಿ ಹಾಗೂ ಭತ್ತ ಕೃಷಿಕರು ಉಪಸ್ಥಿತರಿದ್ದರು.