

ಬಸವಾಪಟ್ಟಣ: ರೈತರು ಯಾಂತ್ರಿಕೃತ ಭತ್ತ ನಾಟಿ ಬೇಸಾಯ ಕೈಗೊಂಡರೆ ಖರ್ಚು ಕಡಿಮೆ ಹಾಗೂ ಅಧಿಕ ಇಳುವರಿ ಪಡೆದು ಆರ್ಥಿಕ ಬಲವರ್ಧನೆಗೆ ನೆರವಾಗುತ್ತದೆ ಎಂದು ಚನ್ನಗಿರಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಕೃಷಿ ಅಧಿಕಾರಿ ಹನುಮಂತಪ್ಪ ಹೇಳಿದರು.
ಸಮೀಪದ ಮತ್ತಿ ಗ್ರಾಮದ ರೈತ ನರೇಂದ್ರರಾವ್ ಅವರ ಜಮೀನಿನಲ್ಲಿ ಯಂತ್ರಶ್ರೀ ಯೋಜನೆಯ ಯಾಂತ್ರಿಕೃತ ಬೇಸಾಯದ ಮೂಲಕ ಸಸಿ ಮಡಿ ತಯಾರಿಕೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರೈತರು ಇಂದಿಗೂ ಸಾಂಪ್ರದಾಯಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ಕಾರಣ ಕೃಷಿ ಇಂದು ಆಶಾದಾಯಕವಾಗಿ ಉಳಿದಿಲ್ಲ. ಪ್ರಕೃತಿ ವಿಕೋಪಗಳು, ಬೆಳೆಗೆ ರೋಗ, ಕೀಟ ಬಾಧೆ, ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲದಿರುವುದು ಹೀಗೆ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಗೆ ಯಾಂತ್ರಿಕೃತ ಬೇಸಾಯ ಪದ್ಧತಿ ಪರಿಹಾರ ನೀಡಬಹುದು ಎಂದರು.
ಯಂತ್ರ ನಾಟಿಯಿಂದ ಸೂರ್ಯಕಿರಣಗಳು ನೇರವಾಗಿ ಸಸಿಗಳ ಬುಡಕ್ಕೆ ಬೀಳುವುದರಿಂದ ಗಾಳಿ, ಬೆಳಕು ಹಾದು ಹೋಗಲು ಅವಕಾಶ ಇರುತ್ತದೆ. ಬೆಳೆಗೆ ರೋಗ, ಕೀಟ ಬಾಧೆ ಇರುವುದಿಲ್ಲ ಎಂದರು. ರೈತರಾದ ವಿನಯ್, ಅವಿನಾಶ್, ತ್ರಿಮೂರ್ತಿ, ದೊಡ್ಡೇಶಿ ಇದ್ದರು.