ಯಂತ್ರಾಧಾರಿತ ಚಿತಾಗಾರ ಆರಂಭ

2manju1-Web
ಬೆಳಗಾವಿ ಸದಾಶಿವ ನಗರದ ರುದ್ರಭೂಮಿಯಲ್ಲಿರುವ ಡೀಸೆಲ್ ಯಂತ್ರ ಚಿತಾಗಾರದಲ್ಲಿ ಅನಾಥ ಶವದ ಅಂತ್ಯ ಸಂಸ್ಕಾರ ಮಾಡುತ್ತಿರುವ ಪಾಲಿಕೆಯ ಮಾಜಿ ಮೇಯರ್ ವಿಜಯ ಮೋರೆ.
Published on

ಬೆಳಗಾವಿ: ಸ್ಮಾರ್ಟ್ ಸಿಟಿಯಲ್ಲಿ ಶವಸಂಸ್ಕಾರ ಮಾಡಲು ನಾನಾ ರೀತಿಯ ತೊಂದರೆ ಎದುರಿಸುತ್ತಿದ್ದ ಸಾರ್ವಜನಿಕರಿಗೆ ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಪುನಃ ಆರಂಭಿಸಿರುವ ಡೀಸೆಲ್ ಯಂತ್ರ ಚಿತಾಗಾರ ಅನುಕೂಲವಾಗಿದೆ. ಕರೊನಾ ಸೋಂಕಿನಿಂದ ಬುಧವಾರ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನೂ ಪಾಲಿಕೆ ಸಿಬ್ಬಂದಿ ಇದೇ ಡೀಸೆಲ್ ಚಿತಾಗಾರದಲ್ಲಿಯೇ ಮಾಡಿದ್ದಾರೆ.

ಬೆಳಗಾವಿ ಸದಾಶಿವ ನಗರದ ರುದ್ರ ಭೂಮಿಯಲ್ಲಿ 3 ತಿಂಗಳ ಹಿಂದೆ ಕಾರ್ಯಾರಂಭ ಮಾಡಿದ್ದ ಡೀಸೆಲ್ ಯಂತ್ರ ಚಿತಾಗಾರದಲ್ಲಿ ಪ್ರಾಯೋಗಿಕವಾಗಿ 4 ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದೀಗ ಕರೊನಾ ಸೋಂಕಿನಿಂದ ಬುಧವಾರ ಮೃತಪಟ್ಟ ವ್ಯಕ್ತಿಯ ಶವವನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ಪಾಲಿಕೆ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡುವ ಮೂಲಕ ಅಧಿಕೃತವಾಗಿ ಡೀಸೆಲ್ ಯಂತ್ರ ಚಿತಾಗಾರಕ್ಕೆ ಚಾಲನೆ ಕೊಟ್ಟರು.

35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ: ನಗರದಲ್ಲಿ ಆಯಾ ಸಮುದಾಯದವರಿಗಾಗಿ ಈಗಾಗಲೇ ರುದ್ರಭೂಮಿಗಳಿವೆ. ಆ ಸ್ಥಳಗಳಲ್ಲಿಯೇ ತಮ್ಮ ಸಮುದಾಯದ ವಿಧಿ ವಿಧಾನಗಳಂತೆ ಶವ ಸಂಸ್ಕಾರ ಮಾಡುತ್ತಿದ್ದಾರೆ. ಕೆಲ ಸಮುದಾಯದವರು ಶವವನ್ನು ಮಣ್ಣಿನಲ್ಲಿ ಹೂಳಿದರೆ, ಇನ್ನೂ ಕೆಲ ಸಮುದಾಯದವರು ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಾರೆ. ಆದರೆ, ಇತ್ತೀಚೆಗೆ ಶವ ಸುಡಲು ಕಟ್ಟಿಗೆ (ಸೌದೆ)ಯ ಅಭಾವವಿದ್ದು, ಮಳೆಗಾಲದ ವೇಳೆ ಶವ ಸುಡಲು ಸಂಬಂಧಿಕರು ಸಮಸ್ಯೆ ಅನುಭವಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಡೀಸೆಲ್ ಯಂತ್ರ ಚಿತಾಗಾರದ ಅವಶ್ಯಕತೆ ಮನಗಂಡು 2019-20ನೇ ಸಾಲಿನಲ್ಲಿ ರಾಜ್ಯ ಹಣಕಾಸು ಯೋಜನೆಯಡಿ 35 ಲಕ್ಷ ರೂ. ವೆಚ್ಚದಲ್ಲಿ ಡೀಸೆಲ್ ಯಂತ್ರ ಆಧಾರಿತ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಶವ ಸಂಸ್ಕಾರ ಮಾಡಲು ಸಂಬಂಧಿಕರು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಡೀಸೆಲ್ ಯಂತ್ರ ಚಿತಾಗಾರ ಆರಂಭಿಸಿರುವುದು ಒಳ್ಳೆಯದು. ಆದರೆ, ಒಂದು ಶವಸಂಸ್ಕಾರ ಮಾಡಲು ಕನಿಷ್ಠ 3000 ರೂ. ವರೆಗೆ ಖರ್ಚಾಗುತ್ತಿದೆ. ಇದರ ಬದಲಾಗಿ ಸಗಣಿಯಿಂದ ತಯಾರಿಸುವ ಬೆರಣಿ (ಕುಳ್ಳಿನಿಂದ)ಯಿಂದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವುದು ಸೂಕ್ತ.| ವಿಜಯ ಮೋರೆ, ಪಾಲಿಕೆಯ ಮಾಜಿ ಮೇಯರ್

ಬೆಳಗಾವಿ ಸದಾಶಿವನಗರದ ರುದ್ರಭೂಮಿಯಲ್ಲಿ ಡೀಸೆಲ್ ಯಂತ್ರ ಚಿತಾಗಾರ ಕಾರ್ಯಾರಂಭ ಮಾಡಿದೆ. ಈಗಾಗಲೇ ಕರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ ಇಲ್ಲಿಯೇ ಮಾಡಲಾಗಿದೆ. ರುದ್ರಭೂಮಿಯಲ್ಲಿ ಸಮುದಾಯದ ವಿಧಿ ವಿಧಾನಗಳಂತೆ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ.| ಕೆ.ಎಚ್. ಜಗದೀಶ, ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net